ಬೆಂಗಳೂರು, ಡಿ.5- ನಗರದ ನಾಗರಿಕರಿಗೆ ಕಾಂಗ್ರೆಸ್ನವರು ದಯಪಾಲಿಸಿರುವ ಗುಂಡಿ ಭಾಗ್ಯ, ಕಸದ ಭಾಗ್ಯ, ಕಾಯಿಲೆ ಭಾಗ್ಯಗಳನ್ನು ಈ ಕೂಡಲೇ ವಾಪಸ್ ಪಡೆಯಬೇಕೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಆರ್.ಅಶೋಕ್ ಇಂದಿಲ್ಲಿ ಒತ್ತಾಯಿಸಿದರು. ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಬಿಬಿಎಂಪಿ ಆಡಳಿತದ ವೈಫಲ್ಯ ಖಂಡಿಸಿ ಪಾಲಿಕೆಗೆ ಬಿಜೆಪಿ ಮುತ್ತಿಗೆ ಹಮ್ಮಿಕೊಂಡಿದ್ದ ವೇಳೆ ಅವರು ಮಾತನಾಡಿದರು.
ಉದ್ಯಾನನಗರಿ ಖ್ಯಾತಿಯ ಬೆಂಗಳೂರು ಅಸಮರ್ಪಕ ಕಸವಿಲೇವಾರಿ, ಹದಗೆಟ್ಟ ರಸ್ತೆಗಳಿಂದಾಗಿ ತನ್ನ ಮುಖಕ್ಕೆ ತಾನೇ ಮಸಿಬಳಿದುಕೊಂಡಂತಾಗಿದೆ. ಇದಕ್ಕೆ ಪಾಲಿಕೆ ಆಡಳಿತವೇ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಮಂಜುನಾಥರೆಡ್ಡಿ ಮತ್ತು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಸಮಸ್ಯೆ ಬಗೆಹರಿಸುವ ಬದಲು ಕೇವಲ ಪತ್ರಿಕಾ ಹೇಳಿಕೆ ನೀಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಮೂಲದಲ್ಲೇ ಕಸ ವಿಂಗಡಿಸುವ ಯೋಜನೆ ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಹೊಸ ಕಸ ಸಂಗ್ರಹಾಗಾರ ಆರಂಭಿಸಲು ಅಸಡ್ಡೆ ತೋರಿರುವುದರಿಂದ ಡಂಪಿಂಗ್ ಯಾರ್ಡ್ಗಳು ಕಲುಷಿತಗೊಂಡು ಸುತ್ತಮುತ್ತಲಿನ ಜನ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಗರದಲ್ಲಿ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಈ ಸ್ಥಿತಿಗೆ ನಾವು ಕಾರಣರಲ್ಲ ಎಂದು ಹೇಳಿಕೆ ನೀಡಿರುವ ಜಾರ್ಜ್ ಅವರ ನಿಲುವನ್ನು ಎತ್ತಿ ತೋರುತ್ತಿದೆ ಎಂದು ವ್ಯಂಗ್ಯವಾಡಿದರು.
ಹಾಳುಬಿದ್ದ ರಸ್ತೆಗಳನ್ನು ಕೇಳುವವರೇ ಇಲ್ಲ. ಗುಂಡಿ ಮುಚ್ಚುವ ನೆಪದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರಸ್ತೆ ಅಪಘಾತದಿಂದಾಗಿ ಐದು ಮಂದಿ ಅಮಾಯಕರು ಜೀವತೆತ್ತಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ಆಡಳಿತದ ವೈಫಲ್ಯವೇ ಕಾರಣ ಎಂದರು.
ರೆಡ್ಡಿ ಎಚ್ಚರಿಕೆ:
ಕಾಂಗ್ರೆಸ್ನವರು ತಮ್ಮ ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಕಡೆ ಬೆರಳು ತೋರಿಸುತ್ತಾರೆ. ಇಂತಹ ಬೇಜವಾಬ್ದಾರಿ ಪಾಲಿಕೆ ಆಡಳಿತದ ವಿರುದ್ಧ ‘ಗುಂಡಿ ಮುಚ್ಚಿರಿ-ಕಸ ಎತ್ತಿರಿ’ ಆಂದೋಲನ ಹಮ್ಮಿಕೊಳ್ಳುವುದಾಗಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಎಚ್ಚರಿಸಿದರು. ಪಾಲಿಕೆ ಆಡಳಿತ ತನ್ನ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಳ್ಳುವವರೆಗೂ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ರೆಡ್ಡಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶಾಸಕರಾದ ವಿ.ಸೋಮಣ್ಣ, ಅಶ್ವತ್ಥ ನಾರಾಯಣ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ಮಾಜಿ ಸದಸ್ಯರಾದ ಎನ್.ಆರ್.ರಮೇಶ್, ಸಿ.ಕೆ.ರಾಮಮೂರ್ತಿ, ಪಾಲಿಕೆ ಸದಸ್ಯರಾದ ಬೈರಸಂದ್ರ ನಾಗರಾಜ್, ಕಟ್ಟೆಸತ್ಯನಾರಾಯಣ ಮತ್ತಿತರ ಬಿಜೆಪಿ ಸದಸ್ಯರು ಪಾಲ್ಗೊಂಡಿದ್ದರು.