ಕರ್ನಾಟಕ

ಬೌದ್ಧ ಧರ್ಮದ ಜೀವನ ಕ್ರಮ ರಾಜ್ಯದಲ್ಲೂ ಪಸರಿಸಲಿ: ಚಂದ್ರಶೇಖರ ಕಂಬಾರ

Pinterest LinkedIn Tumblr

kambara_______

ಬೆಂಗಳೂರು, ಡಿ.4: ಬೌದ್ಧ ಧರ್ಮದ ಜೀವನ ಕ್ರಮವನ್ನು ರಾಜ್ಯ ದ ಜನತೆ ಹೆಚ್ಚು ತಿಳಿಯುವಂತಾಗಬೇಕು. ಈ ನಿಟ್ಟಿನಲ್ಲಿ ಬೌದ್ಧ ಬಿಕ್ಕುಗಳು ರಾಜದಾದ್ಯಂತ ಪ್ರವಾಸ ಮಾಡಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಬೇಕೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.

ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ಹಾಗೂ ಅರುಣಾಚಲ ಪ್ರದೇಶದ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಹಿಮಾಲಯನ್ ಕಲ್ಚರಲ್ ಸ್ಟಡೀಸ್ ವತಿಯಿಂದ ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೌದ್ಧ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಬೌದ್ಧ ಧರ್ಮದ ಮೂಲ ಬೇರು ಭಾರತ. ಆದರೆ, ವೈದಿಕ ಧರ್ಮದ ಉಪಟಳದಿಂದಾಗಿ ಬೌದ್ಧ ಬಿಕ್ಕುಗಳು ಶ್ರೀಲಂಕಾ, ಚೀನಾ, ಜಪಾನ್, ಬರ್ಮಾ ದೇಶಗಳಿಗೆ ಪಲಾಯನ ಮಾಡಬೇಕಾಯಿತು. ಈ ಕಾರಣದಿಂದಾಗಿ ಬೌದ್ಧ ಧರ್ಮದ ಆಚಾರ ವಿಚಾರಗಳು ಪರಕೀಯ ರೀತಿಯಲ್ಲಿಯೆ ಕಾಣಿಸುತ್ತವೆ. ಹಾಗಾಗಿ ಬೌದ್ಧ ಬಿಕ್ಕುಗಳು ಬೌದ್ಧ ಧರ್ಮವನ್ನು ಹೆಚ್ಚು ಪ್ರಚಾರ ಮಾಡಬೇಕೆಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ಅಸಹಿ ಷ್ಣುತೆಯ ಈ ಸಂದರ್ಭದಲ್ಲಿ ಬೌದ್ಧ ಧರ್ಮದ ತತ್ವಗಳು ಜನತೆಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೌದ್ಧ ಬಿಕ್ಕುಗಳೊಂದಿಗೆ ಸಂಘ ಸಂಸ್ಥೆಗಳು ಒಟ್ಟುಗೂಡಿ ಬೌದ್ಧ ಧರ್ಮದ ತತ್ವಾದರ್ಶಗಳನ್ನು ಜನತೆಗೆ ತಿಳಿಸುವಂತಾಗಲಿ ಎಂದು ಆಶಿಸಿದರು.

ಭಾರತವು ಹತ್ತಾರು ಧರ್ಮ, ನೂರಾರು ಜಾತಿಗಳು, ಹಲವು ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡಿರುವ ದೇಶ. ಇಲ್ಲಿ ಯಾವ ಸಂಸ್ಕೃತಿಯೂ ಪ್ರತ್ಯೇಕವಿಲ್ಲ. ಸಾವಿರಾರು ವರ್ಷಗಳಿಂದಲೂ ಒಂದು ಧರ್ಮದ ಆಚಾರ ವಿಚಾರಗಳು ಮತ್ತೊಂದು ಧರ್ಮದೊಂದಿಗೆ ಬೆರೆತು ಹೋಗಿವೆ. ಇಂತಹ ವೈಶಿಷ್ಟ ಜಗತ್ತಿನ ಯಾವ ದೇಶದಲ್ಲೂ ಕಾಣಲು ಸಿಗುವುದಿಲ್ಲವೆಂದು ಅವರು ಅಭಿಮಾನ ವ್ಯಕ್ತಪಡಿಸಿದರು.

ಉಚಿತ ಚಿಕಿತ್ಸೆ: ನಾಲ್ಕು ದಿನ ನಡೆದ ಬೌದ್ಧ ಮಹೋತ್ಸವದಲ್ಲಿ ಟಿಬೆಟ್ ಆಯುರ್ವೇದಿಕ್ ವೈದ್ಯರು ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆಯನ್ನು ಏರ್ಪಡಿಸಿದ್ದರು. ಹಾಗೂ ಟಿಬೆಟಿಯನ್ ಕಲಾವಿದರು ಬಣ್ಣದ ಮರಳಿನಿಂದ ಚಿತ್ತಾರ ಬಿಡಿಸಿದ್ದು ನೋಡುಗರನ್ನು ಆಕರ್ಷಿಸುತ್ತಿತ್ತು.

ಕಾರ್ಯಕ್ರಮಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅರುಣಾಚಲ ಪ್ರದೇಶದ ಸಿಐಎಚ್‌ಸಿಎಸ್ ನಿರ್ದೇಶಕ ಗೆಷೆ ಎನ್ ತಾಶಿ ಬಾಪು, ಬೆಂಗಳೂರು ಮಹಾಬೋಧಿ ಸೊಸೈಟಿಯ ರಾಜಾರಾಮ್, ಉಪಾಸನ ಸಂಸ್ಥೆಯ ಶಿಕ್ಷಕ ಡಾ.ಶಿವರಾಜ್ ಮತ್ತಿತರರಿದ್ದರು.

Write A Comment