ರಾಷ್ಟ್ರೀಯ

ಚೆನ್ನೈ ಜಲಪ್ರಳಯ ಮುನ್ಸೂಚನೆ ನೀಡಿದ್ದ ಐಎಎಸ್ ಅಧಿಕಾರಿಯನ್ನೇ ಎತ್ತಂಗಡಿ ಮಾಡಿದ್ದರು!

Pinterest LinkedIn Tumblr

vijay_pingaleಐಎಎಸ್ ಅಧಿಕಾರಿ ವಿಜಯ್ ಪಿಂಗಲೆ ಹೆಸರು ನೆನಪಿದೆಯಾ? ನೆನಪಿರಲಿಕ್ಕಿಲ್ಲ. ಯಾಕೆಂದರೆ ಅವರು ಯಾವುದೇ ಸೆಲೆಬ್ರಿಟಿ ಅಲ್ಲ. ಅವರೊಬ್ಬ ದಕ್ಷ ಅಧಿಕಾರಿಯಾಗಿದ್ದರು. ಅಷ್ಟೇ ಅಲ್ಲ ಚೆನ್ನೈನಲ್ಲಿ ಜಲಪ್ರಳಯವಾಗಲಿದೆ ಎಂಬ ಮುನ್ಸೂಚನೆ ಕೊಟ್ಟ ಅಧಿಕಾರಿ ಅವರು.
ಚೆನ್ನೈನ ಜಲಪ್ರಳಯದ ಬಗ್ಗೆ ಹೇಳುವಾಗ ವಿಜಯ್ ಪಿಂಗಲೆ ಅವರ ಕೆಲಸದ ಬಗ್ಗೆ ಹೇಳಲೇಬೇಕಾಗಿದೆ. ಚೆನ್ನೈ ನಗರದಲ್ಲಿ ಕಳಪೆ ಕಾಮಗಾರಿ ಮಾಡಿ ರಸ್ತೆ ನಿರ್ಮಾಣ ಮಾಡುತ್ತಿದ್ದ ಕಾಂಟ್ರಾಕ್ಟರ್ (ಗುತ್ತಿಗೆದಾರರು)ಗಳ ಹೆಸರನ್ನು ಬಹಿರಂಗ ಪಡಿಸಿದ ದಕ್ಷ ಅಧಿಕಾರಿ ಡಾ.ವಿಜಯ್ ಪಿಂಗಲೆ. ಆದರೆ ಹೆಸರು ಬಹಿರಂಗ ಪಡಿಸಿದ ಮೂರೇ ದಿನಗಳಲ್ಲಿ ವಿಜಯ್ ಅವರನ್ನು ಸರ್ಕಾರ ಎತ್ತಂಗಡಿ ಮಾಡಿತ್ತು.

ದಕ್ಷ ಅಧಿಕಾರಿಗೆ ಇಲ್ಲ ಬೆಲೆ

ಚೆನ್ನೈ ಕಾರ್ಪೊರೇಷನ್‌ನ ಜಂಟಿ ಆಯುಕ್ತರಾಗಿದ್ದ ಡಾ. ವಿಜಯ್ ಪಿಂಗಲೆ ಅವರಿಗೆ ನವೆಂಬರ್ 14ರಂದು ಪ್ರಧಾನ ಕಾರ್ಯದರ್ಶಿಯವರಿಂದ ವರ್ಗಾವಣೆ ಆದೇಶ ಸಿಕ್ಕಿದ್ದು,  ಅವರನ್ನು ಕೈಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿತ್ತು.

ಎಂಬಿಬಿಎಸ್ ಪದವಿ ಪಡೆದ ಪಿಂಗಲೆ 2004ರ ಬ್ಯಾಚ್‌ನಲ್ಲಿ ಐಎಎಸ್ ಪಾಸಾಗಿ ಚೆನ್ನೈ ಕಾರ್ಪೋರೇಷನ್‌ನಲ್ಲಿ 16 ತಿಂಗಳುಗಳ ಕಾಲ ಜಂಟಿ ಆಯುಕ್ತರ ಸೇವ ಸಲ್ಲಿಸಿದ್ದರು.

ಆ 16 ತಿಂಗಳುಗಳಲ್ಲಿ ಅವರು ಮಹತ್ತರವಾದ ಕೆಲಸಗಳನ್ನು ಮಾಡಿದ್ದರು. ರಸ್ತೆಗಳ ಕಳಪೆ ಕಾಮಗಾರಿ ಮಾಡಿದ ಕಾಂಟ್ರಾಕ್ಟರುಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಪಿಂಗಲೆ, ಆ ಕಾಂಟ್ರಾಕ್ಟರ್ ಗಳ ಹೆಸರು ಬಹಿರಂಗ ಪಡಿಸಿದ ಕೆಲವೇ ದಿನಗಳಲ್ಲಿ ಎತ್ತಂಗಡಿಯಾಗಿದ್ದರು.

ನವೆಂಬರ್ 11 ರಂದು, ಕಳಪೆ ಕಾಮಗಾರಿ ಮಾಡಿದ 9 ಕಾಂಟ್ರಾಕ್ಟರ್ ಗಳ ಹೆಸರನ್ನು ಪಿಂಗಲೆ ಬಹಿರಂಗ ಪಡಿಸಿದ್ದರು. ಮಾತ್ರವಲ್ಲದೆ ಈ ಕಾಂಟ್ರಾಕ್ಟರ್ ಗಳು ದಂಡ ತೆರಬೇಕು ಎಂದು ಆದೇಶಿಸಿದ್ದರು. ಆದರೆ ಪಿಂಗಲೆಯ ಮಾತಿಗೆ ಅಲ್ಲಿ ಬೆಲೆ ಇರಲಿಲ್ಲ.

ಪಿಂಗಲೆ ಬಗ್ಗೆ ಸಚಿವರಿಗೂ ಇತ್ತು ಅಸಮಾಧಾನ
ಮುಂಗಾರು ಮಳೆ ಆರಂಭವಾಗುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಚರ್ಚೆ ನಡೆಸಲು ಸಚಿವ ಎಸ್. ಪಿ ವೇಲುಮಣಿ ಸಭೆ ಕರೆದಿದ್ದರು.
ಮಳೆ ಬಂದಾಗ ಯಾವ್ಯಾವ ಪ್ರದೇಶದಲ್ಲಿ ನೀರು ತಂಗುತ್ತದೆ ಎಂಬುದು ಪಿಂಗಲೆ ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಪಿಂಗಲೆಯವರ ಮಾತನ್ನು ಯಾರೂ ಕೇಳಲೇ ಇಲ್ಲ. ಪಿಂಗಲೆ ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯುತ್ತಿರಲಿಲ್ಲ. ಆದ್ದರಿಂದಲೇ ಸಚಿವರಿಗೂ ಪಿಂಗಲೆಯವರ ಬಗ್ಗೆ ಅಸಮಾಧಾನವಿತ್ತು ಅನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅವರ ಸಹದ್ಯೋಗಿಗಳು.

ಚೆನ್ನೈನಲ್ಲಿ ಜಲ ಪ್ರಳಯವುಂಟಾಗಲು ಅಲ್ಲಿನ ಅವ್ಯವಸ್ಥೆಯೇ ಕಾರಣ ಎಂಬುದು ಸ್ಪಷ್ಟ. ಆ ಅವ್ಯವಸ್ಥೆಯನ್ನು ಸರಿಪಡಿಸಲು ಶ್ರಮವಹಿಸಿದರೆ ಏನಾಗುತ್ತದೆ ಎಂಬುದಕ್ಕೆ ಪಿಂಗಲೆಯವರ ವರ್ಗಾವಣೆಯೇ ಸಾಕ್ಷಿ. ಜನರ ಒಳಿತಿಗಾಗಿ ದುಡಿವ ಸರ್ಕಾರಿ ಅಧಿಕಾರಿಗಳು ದಕ್ಷರಾಗಿದ್ದರೆ ಅವರಿಗೆ ಉಳಿಗಾಲವಿಲ್ಲ ಎಂಬುದಕ್ಕೆ ಇದೂ ಒಂದು ಉದಾಹರಣೆ.

Write A Comment