ಕರ್ನಾಟಕ

ಈ ಶೋಕಿವಾಲಾನನ್ನು ನಂಬಿದ್ರೆ ಬಿಳುತ್ತೆ ಪಂಗನಾಮ । ಈ ಹೈಟೆಕ್ ಕಳ್ಳನ ಹಿಸ್ಟರಿ ಇಲ್ಲಿದೆ ನೋಡಿ

Pinterest LinkedIn Tumblr

shokivalaಬೆಂಗಳೂರು, ಡಿ.3- ಶ್ರೀಮಂತರ ಸೋಗಿನಲ್ಲಿ ಬಂದು ನಂಬಿಸಿ ಕೋಟ್ಯಾಂತರ ರೂ. ಮೌಲ್ಯದ ಕಾರುಗಳನ್ನು ಕದ್ದೊಯ್ದು ವಂಚಿಸಿ ನಂತರ ಅದರ ತನಿಖೆಗೆ ಮುಂದಾದ ಪೊಲೀಸರಿಗೆ ಮಂಕುಬೂದಿ ಎರಚಿರುವ ಹೈಟೆಕ್ ಕಳ್ಳನೊಬ್ಬನ ಭಯಾನಕ ಕಥನವಿದು. ಕುಮಾರಸ್ವಾಮಿಲೇಔಟ್‌ನ ಸಚಿನ್‌ಕುಮಾರ್ ಎಂಬ ವ್ಯಕ್ತಿ 2002ರಲ್ಲಿ ಸಾಮಾನ್ಯ ಕಾರು ಚಾಲಕನಾಗಿದ್ದವನು 2005ರ ವೇಳೆಗೆ ಕೇವಲ ಮೂರು ವರ್ಷದಲ್ಲಿ ವಂಚನೆಗಳ ಮೂಲಕವೇ ದಿಢೀರ್ ಶ್ರೀಮಂತನಾಗಿ. ಅದೇ ಶ್ರೀಮಂತಿಕೆಯನ್ನು ಬಳಸಿಕೊಂಡು ಮತ್ತಷ್ಟು ಶ್ರೀಮಂತರನ್ನು ವಂಚಿಸಿರುವ ಕುರಿತು ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಪತ್ರಿಕೆಗೆ ಸಿಕ್ಕಿರುವ ದಾಖಲಾತಿಗಳ ಪ್ರಕಾರ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 340/2015ರಡಿ ದಾಖಲಾಗಿರುವ ಪ್ರಕರಣದಂತೆ ಮಹಾಲಕ್ಷ್ಮಿಲೇಔಟ್‌ನ ಕುಮಾರ್ ಟೂರ್ಸ್ಣ ಅಂಡ್ ಟ್ರಾವೆಲ್ಸ್ ಮಾಲೀಕರಿಗೆ ನಂಬಿಸಿ ಸುಮಾರು 3.70ಕೋಟಿ ರೂ. ಮೌಲ್ಯದ ಐದು ಐಷಾರಾಮಿ ಕಾರುಗಳನ್ನು ಕದೊಯ್ಯಲಾಗಿದೆ.

ಕುಮಾರ್ ಟೂರ್ಸ್ರ ಅಂಡ್ ಟ್ರಾವೆಲ್ಸ್‌ನ ಮಾಲೀಕ ಕುಮಾರ್ ಮತ್ತು ಸಚಿನ್ ಕುಮಾರ್ ಇಬ್ಬರೂ ಬಸವೇಶ್ವರ ನಗರದ ಟ್ರಾವೆಲ್ಸ್‌ವೊಂದರಲ್ಲಿ ಚಾಲಕರಾಗಿದ್ದರು. ಅನಂತರ ತಾವೇ ಸ್ವಂತ ವ್ಯವಹಾರ ಆರಂಭಿಸಿ ಬೇರೆಯಾಗಿದ್ದರು.  ಸಚಿನ್ ಕೂಡ ವತ್ಸಲಾ ಟ್ರಾವೆಲ್ಸ್ ಎಂಬ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಇದ್ದಕ್ಕಿದ್ದಂತೆ ಅದರಲ್ಲಿ ನಷ್ಟವಾಯಿತು ಎಂದು ಹೇಳಿಕೊಂಡು ಮತ್ತೆ ಕುಮಾರ್ ಸಂಪರ್ಕಕ್ಕೆ ಬಂದಿದ್ದಾರೆ.

ನನ್ನ ಟ್ರಾವೆಲ್ಸ್‌ನ ಎಲ್ಲಾ ಕಾರುಗಳನ್ನು ಮಾರಾಟ ಮಾಡಿರುವುದರಿಂದ ನಿಮ್ಮ ಟ್ರಾವೆಲ್ಸ್‌ನಲ್ಲಿರುವ ಕಾರುಗಳನ್ನು ನನ್ನ ಗ್ರಾಹಕರಿಗೆ ಬಾಡಿಗೆ ರೂಪದಲ್ಲಿ ಕೊಡಿ. ವ್ಯವಹಾರ ಪಕ್ಕಾ ಇರುತ್ತದೆ. ಪ್ರತೀ ತಿಂಗಳು ಬಾಡಿಗೆ ಕರಾರುವಕ್ಕಾಗಿ ತೆಗೆದುಕೊಳ್ಳಿ ಎಂದು ನಂಬಿಸಿ ಸಚಿನ್ ನಮ್ಮಿಂದ ತಲಾ 55ಲಕ್ಷ ಮೌಲ್ಯದ ಎರಡು ಮರ್ಸಿಡೆನ್ಸ್ ಬೆಂಜ್, ತಲಾ 70ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಮತ್ತು ಲ್ಯಾಂಡ್‌ರೋವರ್, 32 ಲಕ್ಷ ರೂ. ಮೌಲ್ಯದ ಟಯೋಟಾ ಫಾರ್ಚೂನರ್ ಕಾರುಗಳನ್ನು ಬಾಡಿಗೆ ಪಡೆದಿದ್ದ ಎಂದು ಕುಮಾರ್ ದೂರಿದ್ದಾರೆ. ಕುಮಾರಸ್ವಾಮಿ ಲೇಔಟ್‌ನಲ್ಲಿ ಸಚಿನ್‌ಗೆ ಸ್ವಂತ ಮನೆಯಿದ್ದು, 75 ಲಕ್ಷ ರೂ. ಮೌಲ್ಯದ ಐಷಾರಾಮಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ. ಅವರ ತಾಯಿ ಕೂಡ ನನ್ನ ಬಳಿ ಬಹಳ ಒಳ್ಳೆಯವರಂತೆ ಮಾತನಾಡುತ್ತಿದ್ದರು. ಇದನ್ನೆಲ್ಲಾ ನಂಬಿ ನನ್ನ ಕಾರುಗಳನ್ನು ಬಾಡಿಗೆ ನೀಡಿದೆ.

ಮೊದಲ ಎರಡು ತಿಂಗಳು ಬಾಡಿಗೆ ಪಾವತಿಯಾಯಿತು. ಅನಂತರ ಹಣ ನೀಡಲು ಸತಾಯಿಸಲಾರಂಭಿಸಿದ. ಮನೆ ಹುಡುಕಿಕೊಂಡು ಹೋದಾಗ ಸಚಿನ್‌ನ ನಡವಳಿಕೆ ಅನುಮಾನಸ್ಪದವಾಗಿತ್ತು. ಬಾಡಿಗೆ ಹಣ ವಿಳಂಬವಾದರೂ ಚಿಂತೆಯಿಲ್ಲ. ನನ್ನ ಕಾರುಗಳನ್ನು ವಾಪಸ್ ಕೊಡು ಎಂದು ಮನವಿ ಮಾಡಿದ್ದೆ. ಇಂದು, ನಾಳೆ ಎಂದು ಕಾಲಹರಣ ಮಾಡಿದ ಆತ ಹಿರಿಯರ ಮಧ್ಯಸ್ಥಿಕೆಯಲ್ಲಿ ನನ್ನ ಮನವೊಲಿಸುತ್ತಿದ್ದ. ಇದನ್ನು ನಂಬಿ ನಾನು ಸಂಪೂರ್ಣ ಹಾಳಾಗುವಂತಾಗಿದೆ ಎಂದು ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ಮಾಲೀಕತ್ವ ಬದಲಾವಣೆ:
ಐದು ಐಷಾರಾಮಿ ಕಾರುಗಳಿಗೂ ಸಾಲ ತೀರಿದಂತೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಆರ್‌ಟಿಒ ಕಚೇರಿಗೆ ಸಲ್ಲಿಸಿ ಮಾಲೀಕತ್ವ ನೋಂದಣಿಯನ್ನು ಬದಲಾಯಿಸಿಕೊಳ್ಳುವ ಪ್ರಯತ್ನ ನಡೆದಿದೆ. ಒಂದು ಮರ್ಸಿಡೆಸ್ ಬೆಂಜ್ ಕಾರಿನ ಮಾಲೀಕತ್ವವನ್ನು ಸಚಿನ್ ಸ್ವತಃ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. ನನಗೆ ಈ ಮಾಹಿತಿ ಸಿಕ್ಕ ತಕ್ಷಣ ಆರ್‌ಟಿಒ ಕಚೇರಿಗೆ ಆಕ್ಷೇಪಣೆ ಸಲ್ಲಿಸಿ ಉಳಿದ ಕಾರುಗಳ ನೋಂದಣಿ ಬದಲಾವಣೆಯನ್ನು ತಡೆಹಿಡಿದಿದ್ದೇನೆ. ನಕಲಿ ದಾಖಲಾತಿಗಳ ಸೃಷ್ಟಿಗೆ ಆರ್‌ಟಿಒ ಏಜೆಂಟ್ ಪ್ರದೀಪ್ ಎಂಬಾತ ಕಿಂಗ್‌ಪಿನ್ ಆಗಿದ್ದಾನೆ ಎಂದು ಕುಮಾರ್ ಆರೋಪಿಸಿದ್ದಾರೆ.

ಒಂದು ಕಡೆ ನನ್ನ ಕಾರುಗಳ ಮೇಲಿನ ಸಾಲ ಹಾಗಿಯೇ ಇದೆ. ಅದಕ್ಕೆ ನಾನು ಪ್ರತಿ ತಿಂಗಳು ಕಂತು ಕಟ್ಟಬೇಕು. ಇನ್ನೊಂದು ಕಡೆ ಸಚಿನ್ ಎಲ್ಲಾ ಕಾರುಗಳನ್ನು ಕದ್ದೊಯ್ದಿದ್ದು, ಎಲ್ಲಿದ್ದಾನೆ, ಕಾರುಗಳು ಎಲ್ಲಿವೆ ಎಂಬ ಮಾಹಿತಿಯಿಲ್ಲ. ಬಡ ಕುಟುಂಬದಿಂದ ಬಂದ ನಾನು ಜೀವನೋಪಾಯಕ್ಕಾಗಿ ಹಿರಿಯರ ಕೈ-ಕಾಲು ಹಿಡಿದು ಸಾಲ ಮಾಡಿ ಕಾರುಗಳನ್ನು ಖರೀದಿಸಿದ್ದೆ. ಈಗ 3.70ಕೋಟಿ ರೂ. ಮೌಲ್ಯದ ಕಾರುಗಳನ್ನು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ನನ್ನ ಟ್ರಾವೆಲ್ಸ್‌ನ ಗ್ರಾಹಕರು ಕೇಳಿದ ಸಮಯಕ್ಕೆ ಕಾರುಗಳನ್ನು ಕಳುಹಿಸಲು ಆಗುತ್ತಿಲ್ಲ. ಇತ್ತ ಸಾಲದ ಕಂತುಗಳನ್ನೂ ಕಟ್ಟಲಾಗುತ್ತಿಲ್ಲ. ವಿಪರೀತ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಕುಮಾರ್ ಅಲವತ್ತುಕೊಂಡಿದ್ದಾರೆ. ಹಳದಿಬಣ್ಣದ ನಂಬರ್‌ಪ್ಲೇಟ್ ಕಾರುಗಳಾಗಿದ್ದರಿಂದ ಒರ್ಜಿನಲ್ ಆರ್‌ಸಿ ಬುಕ್‌ಗಳನ್ನು ವಾಹನದಲ್ಲೇ ಇಡಬೇಕಾಗಿತ್ತು. ಇದನ್ನು ಬಳಸಿಕೊಂಡು ಸಚಿನ್ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡಿದ್ದಾನೆ ಎಂದು ಕುಮಾರ್ ಆರೋಪಿಸಿದ್ದಾರೆ.

ಸಚಿನ್‌ನ ವಂಚನೆ ಒಂದು ಕಡೆಯಾದರೆ, ಆತನ ವಿರುದ್ಧ ನಾನು ನೀಡಿರುವ ದೂರಿನ ತನಿಖೆಯೂ ಸರಿಯಾಗಿ ನಡೆಯುತ್ತಿಲ್ಲ. ಅದ್ಯಾವೋ ರೀತಿಯ ಪ್ರಭಾವ ಬಳಸಿದ್ದಾನೋ ಗೊತ್ತಿಲ್ಲ. ಕೆಲವು ಪೊಲೀಸ್ ಅಧಿಕಾರಿಗಳು ಕೂಡ ನಾನೇ ತಪ್ಪು ಮಾಡಿದಂತೆ ನನಗೇ ದಬಾಯಿಸುತ್ತಾರೆ. ನನಗೆ ಸಿಕ್ಕಿದ ಮಾಹಿತಿಯನ್ನು ನೀಡಿದ್ದರಿಂದಾಗಿ ಫಾರ್ಚೂನರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಉಳಿದ ನಾಲ್ಕು ಕಾರುಗಳ ಸ್ಥಿತಿ ಏನೆಂದು ನನಗೆ ಗೊತ್ತಿಲ್ಲ. ಉನ್ನತ್ತಾಧಿಕಾರಿಗಳ ಸೂಚನೆಯನ್ನು ಕೆಳ ಹಂತದ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಕುಮಾರ್ ಗೋಳು ತೋಡಿಕೊಂಡಿದ್ದಾರೆ.
ನನ್ನಂತೆ ಸಚಿನ್ ಹಲವಾರು ಮಂದಿಗೆ ಮೋಸ ಮಾಡಿರುವ ಉದಾಹರಣೆಗಳಿವೆ. ಪ್ರಕರಣಗಳೂ ದಾಖಲಾಗಿವೆ. ಆದರೆ, ಆತನಿಗೆ ಹೆಚ್ಚಿನ ಬೆಂಬಲ ಸಿಗುತ್ತಿರುವುದು ಮಾತ್ರ ನಮ್ಮಂಥ ಬಡವರ ದುರ್ದೈವ ಎಂದು ದುಃಖಿಸಿದ್ದಾರೆ.

Write A Comment