ರಾಷ್ಟ್ರೀಯ

ಮಳೆಯಿಂದ ಮುಳುಗಿದ ಅಮ್ಮನ ನಾಡಲ್ಲಿ ಅನ್ನಕ್ಕಾಗಿ ಆಹಾಕಾರ : ಕುಡಿಯುವ ನೀರಿಗಾಗಿ ಪರದಾಟ

Pinterest LinkedIn Tumblr

riceಚೆನ್ನೈ, ಡಿ.3-ಕೈ ಇಟ್ಟಲ್ಲಿ ಕಾಲಿಟ್ಟಲ್ಲಿ ಈಗ ಎಲ್ಲೆಲ್ಲೂ ನೀರೇ ನೀರು. ಅಪಾರ ಜಲದಾಳಿಯಲ್ಲಿ ದೇಶದ ನಾಲ್ಕನೇ ಮಹಾನಗರ ಚೆನ್ನೈ ತೇಲಾಡುತ್ತಿದೆ. ಆದರೆ, ಇಲ್ಲಿನ ಜನರಿಗೀಗ ಕುಡಿಯಲು ನೀರಿಲ್ಲ. ನೀರಿನಲ್ಲಿ ಈಜುತ್ತಲೇ ಹನಿ ಶುದ್ಧ ನೀರಿಗಾಗಿ ಪರದಾಡುತ್ತಿದ್ದಾರೆ ಜನ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯು ಭಾರಕುಸಿತದಿಂದ ಕಳೆದ ಒಂದು ತಿಂಗಳಿಂದಲೂ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ರಾಜಧಾನಿ ಚೆನ್ನೈ ಸೇರಿದಂತೆ ಇತರ ಕೆಲವು ಕೆಲ ಕರಾವಳಿ ಜಿಲ್ಲೆಗಳು ತತ್ತರಿಸಿಹೋಗಿವೆ.  ಮಾಮೂಲಿಯಂತೆ ನಾಲ್ಕಾರು ದಿನ ಮಳೆ ಬರುತ್ತದೆ. ನಂತರ ನಿಲ್ಲುತ್ತದೆ ಎಂದು ಮೊದಮೊದಲು ಉದಾಸೀನದಿಂದಿದ್ದ ಜನ ಬರುಬರುತ್ತ ಮಳೆಯ ರೌದ್ರವತಾರ ಕಂಡು ಬೆಚ್ಚಿಬಿದ್ದಿದ್ದಾರೆ.

ಕೇವಲ ಬಡವರು, ಕೂಲಿಕಾರರಷ್ಟೇ ಅಲ್ಲ, ನಿನ್ನೆ ಮೊನ್ನೆ ಶ್ರೀಮಂತರೆಂದೇ ತಿಳಿದಿದ್ದ ಸಾವಿರಾರು ಜನ ಈಗಿಲ್ಲಿ ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಅತ್ಯಂತ ಹೃದಯ ವಿದ್ರಾವಕವಾಗಿದೆ.
ಹೊರಪ್ರಪಂಚದ ಸಂಪರ್ಕವಿಲ್ಲ. ವಿದ್ಯುತ್ ಇಲ್ಲ. ಮನೆಬಿಟ್ಟು ಹೊರಬರುವಂತಿಲ್ಲ. ಬಂದರೂ ಏನೂ ಇಲ್ಲ. ಎಲ್ಲಾ ನೀರೇ ನೀರು. ಎಲ್ಲಿ ನೋಡಿದರೂ ನೀರು. ನಮಗೆ ನಮ್ಮ ಮಕ್ಕಳಿಗೆ ಒಂದು ತುತ್ತು ಅನ್ನ ನೀಡಿ ಪುಣ್ಯಕಟ್ಟಿಕೊಳ್ಳಿ ಎಂದು ದೈನ್ಯತೆಯಿಂದ ಕೇಳುತ್ತಿದ್ದಾರೆ ಸಾವಿರಾರು ಜನ.

ಕೆಳಗಡೆ ಎದೆಮಟ್ಟ ನೀರು, ಮೇಲೆ ಧೋ ಎಂದು ಆಕಾಶವೇ ಹರಿದು ಹೋದಂತೆ ಸುರಿಯುತ್ತಿರುವ ಮಳೆ. ಮಳೆಯಿಂದಾಗಿ ನಿಲ್ಲಲು ನೆಲೆ-ನೆಲ. ಹೆಲಿಕಾಪ್ಟರ್‌ಗಳ ಮೂಲಕ ಆಹಾರದ ಪೊಟ್ಟಣ, ಕುಡಿಯುವ ನೀರಿನ ಬಾಟಲ್‌ಗಳು, ಪ್ಯಾಕೆಟ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಿದೆಯಾದರೂ, ಮಳೆಯ ಕಾರಣದಿಂದ ಆಹಾರ ಪೂರೈಕೆ ದುಸ್ತರವಾಗಿದೆ. ನಿಲ್ಲಲು ಜಾಗವಿಲ್ಲದೆ ನೀರಲ್ಲಿ ಮುಳುಗೇಳುತ್ತಿರುವ ಜನ ಹೆಲಿಕಾಪ್ಟರ್‌ಗಳಿಂದ ಆಹಾರ ಪಡೆಯುವುದಾದರೂ ಹೇಗೆ. ಸಣ್ಣ ಮಕ್ಕಳ್ಳು ಕುಡಿಯುವ ಹಾಲಿಲ್ಲದೆ, ನೀರಿಲ್ಲದೆ ಆಕ್ರಂದನ ಮಾಡುತ್ತಿದ್ದಾರೆ. ಅದನ್ನು ನೋಡಿಯೂ ಏನೂ ಮಾಡಲಾರದೆ ಅಸಹಾಯಕರಾಗಿರುವ ಪೋಷಕರು, ಕಣ್ಣೀರು ಸುರಿಸುತ್ತಿದ್ದಾರೆ.
ಒಂದೇ ಸಮನೆ ಸುರಿಯುವ ಮಳೆಯ ಕಾರಣದಿಂದಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಈಗ ಇಲ್ಲಿನ ಬಹುದೊಡ್ಡ ಸಮಸ್ಯೆಯೆಂದರೆ ಸಂತ್ರಸ್ತರ ರಕ್ಷಣೆ, ಅನ್ನ-ನೀರು ಪೂರೈಕೆ ಹಾಗೂ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ, ಔಷಧೋಪಚಾರಗಳನ್ನು ಒದಗಿಸುವುದು. ಎಷ್ಟು ಸಿಬ್ಬಂದಿಯಿದ್ದರೂ, ಹೆಲಿಕಾಪ್ಟರ್‌ಗಳಿದ್ದರೂ, ಈ ಜಲಪ್ರಳಯದ ಎದುರು ಅವೆಲ್ಲ ಅನುಪಯುಕ್ತ ಎಂಬಂತಾಗಿವೆ.

Write A Comment