ಕರ್ನಾಟಕ

ಜಯಂತಿ ಆಚರಿಸಿದ್ದಕ್ಕೆ ಟಿಪ್ಪು ವಂಶಸ್ಥರಿಂದ ಸರ್ಕಾರಕ್ಕೆ ಅಭಿನಂದನೆ

Pinterest LinkedIn Tumblr

Tipu-Sultanಬೆಂಗಳೂರು: ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಿಸಿದ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್‌ ವಂಶಸ್ಥರು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಬುಧವಾರ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್‌ ಇಸ್ಲಾಂ ಅವರನ್ನು ರೇಸ್‌ಕೋರ್ಸ್‌ ರಸ್ತೆಯ ಅವರ ಸರ್ಕಾರಿ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ ಟಿಪ್ಪು ಸುಲ್ತಾನ್‌ ವಂಶದ ಏಳನೇ ತಲೆಮಾರಿನ ಮೊಮ್ಮಗ ಶಹಜಾದ ಇಸ್ಮಾಯಿಲ್‌ ಶಾ ಸುಲ್ತಾನ್‌ ಸಚಿವರ ಮೂಲಕ ರಾಜ್ಯ ಸರ್ಕಾರಕ್ಕೆ ಅಭಿನಂದನಾ ಪತ್ರ ಸಲ್ಲಿಸಿದರು.

ಟಿಪ್ಪು ಸುಲ್ತಾನ್‌ ಮರಣ ಹೊಂದಿದ 216 ವರ್ಷಗಳ ಬಳಿಕ ಇದೇ ಮೊದಲು ಅವರ ಜಯಂತಿಯನ್ನು ಸರ್ಕಾರದಿಂದ ಆಚರಿಸಿದ್ದಕ್ಕೆ ಟಿಪ್ಪು ವಶಂಸ್ಥರು ಕೃತಜ್ಞತೆ ಹೇಳಿದರು. ಈ ವೇಳೆ ಬೆಂಗಳೂರಿನಲ್ಲಿ ನೆಲೆಸಿರುವ ಸುಲ್ತಾನ್‌ರ ಸಂಬಂಧಿ ಸಾಹೇಬ್‌ಜಾದ ಸೈಯದ್‌ ಮನ್ಸೂರ್‌ ಹಾಗೂ ಅವರ ಪತ್ನಿ ರಹ್ಮತ್‌ ಉನ್ನೀಸಾ ಇದ್ದರು.

ಈ ವೇಳೆ ಮಾತನಾಡಿದ ಇಸ್ಮಾಯಿಲ್‌ ಶಾ ಸುಲ್ತಾನ್‌, ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಮಾಡಿದ್ದು ಖುಷಿ ತಂದು ಕೊಟ್ಟರೆ, ಆ ಸಂದರ್ಭದಲ್ಲಿ ಉಂಟಾದ ವಿವಾದದಿಂದ ಮನಸ್ಸಿಗೆ ನೋವಾಯಿತು. ಟಿಪ್ಪು ಸಹಿಷ್ಣುತಾವಾದಿ ಎಂದರು.

ಸಮಾಧಿಯನ್ನು ವಂಶಸ್ಥರಿಗೆ ನೀಡಿ:
ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್‌ ಹೆಸರಲ್ಲಿ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ ಆಗಬೇಕು. ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸಮಾಧಿ ನಿರ್ವಹಣೆಯನ್ನು ವಂಶಸ್ಥರಿಗೆ ವಹಿಸಿಕೊಡಬೇಕು ಎನ್ನುವುದು ನಮ್ಮ ಬೇಡಿಕೆ. ಬ್ರಿಟಿಷರು ನಮ್ಮ ಪೂರ್ವಜರಿಗೆ ಕೋಲ್ಕತಾದಲ್ಲಿ 200 ಎಕರೆ ಜಮೀನು ಮಂಜೂರು ಮಾಡಿದ್ದರು. ಆದರೆ, ಅದನ್ನು ಸ್ಥಳೀಯರು ಸಂಪುರ್ಣವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬದ 45ಕ್ಕೂ ಹೆಚ್ಚು ಮಂದಿ ಕೋಲ್ಕತಾದಲ್ಲಿ ವಾಸ ಮಾಡುತ್ತಿದ್ದರೆ, ಅನೇಕರು ಲಂಡನ್‌ನಲ್ಲಿ ನೆಲೆಸಿದ್ದಾರೆ ಎಂದರು.

ಸಚಿವ ಖಮರುಲ್‌ ಇಸ್ಲಾಂ ಮಾತನಾಡಿ, ಟಿಪ್ಪು ಜಯಂತಿ ಆಚರಿಸಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿರುವ ಟಿಪ್ಪು ವಂಶಸ್ಥರು, ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸಮಾಧಿ ಬಳಿ ಕಳೆದ ಎರಡು ಶತಮಾನಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳನ್ನು ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಟಿಪ್ಪು ವಂಶಸ್ಥರ ರಾಜ್ಯ ಸರ್ಕಾರದ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದರು.

ಟಿಪ್ಪು ಸುಲ್ತಾನ್‌ರ ಜೀವನ, ಸಾಧನೆ ಹಾಗೂ ಇತಿಹಾಸದ ಬಗ್ಗೆ ಅಧ್ಯಯನ ನಡೆಸಲು ಮತ್ತು ಸಂಶೋಧನೆ ಮಾಡಲು ಅವಕಾಶವಿರುವಂತೆ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ.
– ಖಮರುಲ್‌ ಇಸ್ಲಾಂ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ

ಟಿಪ್ಪು ಸುಲ್ತಾನ್‌ ಸರ್ವಧರ್ಮ ಸಹಿಷ್ಣತಾವಾದವನ್ನು ಇಡೀ ಜೀವಿತಾವಧಿಯಲ್ಲಿ ಪಾಲಿಸಿಕೊಂಡು ಬಂದಿದ್ದರು. ಈ ದೇಶ ಮತ್ತು ರಾಜ್ಯಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಟಿಪ್ಪು ಸುಲ್ತಾನ್‌ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿ ಅವರ ತೇಜೋವಧೆ ಮಾಡುವುದು ಸರಿಯಲ್ಲ.
– ಶಹಜಾದ ಇಸ್ಮಾಯಿಲ್‌ ಶಾ ಸುಲ್ತಾನ್‌, ಟಿಪ್ಪು ವಂಶಸ್ಥ
-ಉದಯವಾಣಿ

Write A Comment