ಕರ್ನಾಟಕ

ಡಿ.11ರಂದು ರಾಜ್ಯದಲ್ಲಿ ‘ಹೊಸಬೆಳಕು’: ಡಿ.ಕೆ.ಶಿವಕುಮಾರ್

Pinterest LinkedIn Tumblr

sivakumar_____ಬೆಂಗಳೂರು, ಡಿ.3: ರಾಜ್ಯದ ಎಲ್ಲ ಕುಟುಂಬಗಳಿಗೆ ಎಲ್‌ಇಡಿ ಬಲ್ಬ್ ವಿತರಿಸುವ ಕಾರ್ಯಕ್ರಮಕ್ಕೆ ‘ಹೊಸ ಬೆಳಕು’ ಎಂದು ಹೆಸರಿಡಲಾಗಿದ್ದು, ಡಿ.11ರಂದು ಇದಕ್ಕೆ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಎಲ್‌ಇಡಿ ಬಲ್ಬ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗವು ಅನುಮತಿ ನೀಡಿದ್ದು, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಘೋಷಣೆಗಳನ್ನು ಮಾಡುವಂತಿಲ್ಲ ಎಂದು ಶರತ್ತು ವಿಧಿಸಿದೆ ಎಂದರು.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ 20 ದಿನಗಳಿಂದ ಬೆಂಗಳೂರಿನಲ್ಲಿ ವಿದ್ಯುತ್ ಕಡಿತವಾಗಿಲ್ಲ. ರೈತರಿಗೆ 11 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸಬ್ಸಿಡಿ ಇಲ್ಲದೆ ವಿದ್ಯುತ್ ಖರೀದಿ ಮಾಡಲು ರೈತರು ಮುಂದೆ ಬಂದರೆ ಅವರಿಗೆ 24 ಗಂಟೆ ವಿದ್ಯುತ್ ಪೂರೈಸಲು ಸರಕಾರ ಸಿದ್ಧವಿದೆ ಎಂದು ಶಿವಕುಮಾರ್ ತಿಳಿಸಿದರು.

ನಾಲ್ಕು ರಾಜ್ಯಗಳ ಸಭೆ:  ಶಿವನಸಮುದ್ರದಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರದ ಇಂಧನ ಕಾರ್ಯದರ್ಶಿ ಪೂಜಾರಿ ನೇತೃತ್ವದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳ ಸಭೆ ನಡೆಯಲಿದೆ ಎಂದು ಅವರು ಹೇಳಿದರು.

8,992 ಸಿಬ್ಬಂದಿ ನೇಮಕ: 8,080 ಲೈನ್‌ಮ್ಯಾನ್‌ಗಳು, 413 ಸಹಾಯಕ ಎಂಜಿನಿಯರ್‌ಗಳು, 480 ಜಂಟಿ ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 8,992 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಕೆಪಿಟಿಸಿಎಲ್ ಸೇರಿದಂತೆ ವಿವಿಧ ಹೆಸ್ಕಾಂಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಂದಾಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನ ಉದ್ಯೋಗಿಗಳಿಗೆ ಮಾನವೀಯತೆ ಆಧಾರದಲ್ಲಿ ಸಂಬಳವನ್ನು ಹೆಚ್ಚು ಮಾಡಲಾಗಿದೆ. ಆದರೆ, ಸುಪ್ರೀಂಕೋರ್ಟ್ ಆದೇಶದನ್ವಯ ಅವರನ್ನು ಖಾಯಂ ಮಾಡಲು ಆಗುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ವಿಕಲಚೇತನರ ಸಬಲೀಕರಣ ಸಚಿವೆ ಉಮಾಶ್ರೀ ಜೊತೆ ಈ ಸಮಸ್ಯೆ ಕುರಿತು ತಾನು ಮಾತುಕತೆ ನಡೆಸಿದ್ದೇನೆ. 2007ರಲ್ಲಿ ಇಂಧನ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಟೆಂಡರ್ ಕರೆದು ವಿಕಲಚೇತನರನ್ನು ನೇಮಕ ಮಾಡಿಕೊಂಡಿದ್ದರೆ, ಇವತ್ತು ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದು ಅವರು ಹೇಳಿದರು.

Write A Comment