ಕರ್ನಾಟಕ

ಅಸಮರ್ಪಕ ಮಾಹಿತಿ: ರಾಜ್ಯದ ವಿವಿಧ ಇಲಾಖೆಗಳಿಗೆ 1.69 ಕೋಟಿ ರೂ. ದಂಡ

Pinterest LinkedIn Tumblr

SDSajjanarಕಾರವಾರ, ನ.30: ಮಾಹಿತಿ ಹಕ್ಕು ಅಧಿನಿಯಮ (ಆರ್‌ಟಿಐ)ದಡಿ ಸೂಕ್ತ ಮಾಹಿತಿ ನೀಡದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗವು 1.69 ಕೋಟಿ ರೂ. ದಂಡ ವಿಧಿಸಿದೆ ಎಂದು ಮಾಹಿತಿ ಆಯೋಗದ ಆಯುಕ್ತ ಡಾ. ಶೇಖರ್ ಡಿ. ಸಜ್ಜನರ್ ಹೇಳಿದರು.

ಅವರು ಸೋಮವಾರ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಕಾರವಾರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಕಾರ್ಯಾಗಾರ ನಡೆಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರ್ಜಿದಾರರಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಮಾಹಿತಿ ನೀಡದ ಕಾರಣ ಸುಮಾರು 14.35 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.

ವರ್ಷದಿಂದ ವರ್ಷಕ್ಕೆ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. 2013-14ರಲ್ಲಿ 4,94,491 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 4,59,421 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು. 2014-15ರಲ್ಲಿ 6,18,429 ಅರ್ಜಿಗಳು ಬಂದಿವೆ. ಅವುಗಳಲ್ಲಿ 5,89,576 ಅರ್ಜಿಗಳಿಗೆ ಮಾಹಿತಿ ನೀಡುವ ಮೂಲಕ ವಿಲೇವಾರಿ ಮಾಡಲಾಗಿದೆ.

ಅಲ್ಲದೆ 28,853 ಅರ್ಜಿಗಳು ಬಾಕಿ ಇವೆ ಎಂದರು. ಈಗಾಗಲೇ ಕಂದಾಯ ಇಲಾಖೆಗೆ ಸುಮಾರು 2,00,703, ಗಾಮೀಣಾಭಿವೃದ್ಧಿ 1,00,772, ನಗರಾಭಿವೃದ್ಧಿ ಇಲಾಖೆಗೆ 84,384, ಗೃಹ ಇಲಾಖೆಗೆ 30,155, ಸಾರಿಗೆ ಇಲಾಖೆಗೆ 24,569 ಹಾಗೂ ಶಿಕ್ಷಣ ಇಲಾಖೆಗೆ 23,527 ಅರ್ಜಿಗಳು ಬಂದಿವೆ. ಸೂಕ್ತ ಮಾಹಿತಿ ನೀಡದ ನಗರಾಭಿವೃದ್ಧಿ ಇಲಾಖೆ ವಿವಿಧ ಅಧಿಕಾರಿಗಳಿಗೆ ಸುಮಾರು 48 ಲಕ್ಷ ರೂ., ಕಂದಾಯ ಇಲಾಖೆಗೆ ಸುಮಾರು 47 ಲಕ್ಷ ರೂ. ಹಾಗೂ ಗಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸುಮಾರು 39 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿವಿಧ ಇಲಾಖೆಗೆ ಬರುವ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮಾಹಿತಿಗಳನ್ನು ಆಯಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕುವ ಕ್ರಮಕೈಗೊಳ್ಳಲಾಗುತ್ತಿದೆ. ಇದರಿಂದ ಆಯೋಗಕ್ಕೆ ಬರುವ ಮೇಲ್ಮನವಿ ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗಲಿದೆ ಎಂದು ಆಯುಕ್ತರು ತಿಳಿಸಿದರು. ಬಳಿಕ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಆಯುಕ್ತರು ಮಾಹಿತಿ ಹಕ್ಕು ಕಾರ್ಯಾಗಾರ ನಡೆಸಿದರು. ಈ ಸಂದರ್ಭದಲ್ಲಿ ಜಿಪಂ ಸಿಐಒ ರಾಮಪ್ರಸಾದ್ ಮನೋಹರ್, ಎಸ್ಪಿ ಆರ್.ದಿಲೀಪ್ ವೇದಿಕೆಯಲ್ಲಿ ಇದ್ದರು.

Write A Comment