ಅಂತರಾಷ್ಟ್ರೀಯ

ಮರುಕಳಿಸಿದ ಪುಣ್ಯಕೋಟಿ ಕಥೆ: ಅಚ್ಚರಿ ಮೂಡಿಸಿದೆ ಮೇಕೆ-ಹುಲಿ ಸ್ನೇಹ

Pinterest LinkedIn Tumblr

goat-Become-Best-Friendsರಷ್ಯಾ: ಸತ್ಯ, ನಿಷ್ಠೆಯಿದ್ದರೆ ಎಂತಹ ಕ್ರೂರಿಯಾದಾರೂ ಕರಗಬಲ್ಲನೆಂಬುದಕ್ಕೆ ಉದಾಹರಣೆಯಾಗಿರುವ ಪುಣ್ಯ ಕೋಟಿ ಕಥೆಯನ್ನು ಎಲ್ಲರೂ ಕೇಳಿರಬಹುದು. ಇಂಥಹದ್ದೇ ಕಥೆಗೆ ಹೋಲಿಕೆಯಾಗುವ ಪ್ರಾಣಿಗಳ ನಡುವಿನ ಸ್ನೇಹವೊಂದು ರಷ್ಯಾದ ಈಸ್ಟರ್ನ್ ಸಫಾರಿ ಪಾರ್ಕ್ ನಲ್ಲಿ ಕಂಡು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಆಹಾರಕ್ಕಾಗಿ ಭೇಟೆಯಾಡಲು ಹೋಗುವ ಹುಲಿಗಳು ಹಸಿವಿನ ಸಮಯದಲ್ಲಿ ಏನೇ ಸಿಕ್ಕರೂ ಅದನ್ನು ಭೇಟೆಯಾಡದೇ ಬಿಡುವುದಿಲ್ಲ. ಅಂತಹುದರಲ್ಲಿ ಸಾಧು ಪ್ರಾಣಿ ಮೇಕೆ ಸಿಕ್ಕರೆ ಬಿಟ್ಟೀತೇ… ಈಸ್ಟರ್ನ್ ಸಫಾರಿ ಪಾರ್ಕ್ ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.

ಸಫಾರಿ ಪಾರ್ಕ್ ನಲ್ಲಿರುವ ಆಮುರ್ ಎಂಬ ಹುಲಿಗೆ ಇಲ್ಲಿನ ಸಿಬ್ಬಂದಿಗಳು ಆಹಾರವಾಗಿ ಪ್ರತಿ ವಾರ ಒಂದೊಂದು ಪ್ರಾಣಿಗಳನ್ನು ನೀಡುತ್ತಿದ್ದಾರೆ. ಇದರಂತೆ ಕಳೆದ ವಾರವೂ ಆಹಾರಕ್ಕೆಂದು ಜೀವಂತವಾದ ಒಂದು ಮೇಕೆಯನ್ನು ನೀಡಿದ್ದಾರೆ. ಆದರೆ, ಹುಲಿ ಆದಾವ ಕಾರಣಕ್ಕೋ ಏನೋ ಆ ಮೇಕೆಯನ್ನು ತಿನ್ನದೆ ಸುಮ್ಮನಾಗಿದೆ. ಅಲ್ಲದೆ, ಹುಲಿ ತಾನಿದ್ದ ವಾಸಸ್ಥಾನವನ್ನು ಮೇಕೆಗೆ ಬಿಟ್ಟುಕೊಟ್ಟಿದೆ. ಮೇಕೆ ಹುಲಿ ವಾಸಸ್ಥಾನದಲ್ಲಿ ಮಲಗಿದರೆ, ಹುಲಿ ಬೇರೆಡೆ ಮಲಗುತ್ತಿದೆ.

ಇದೀಗ ಸಫಾರಿ ಪಾರ್ಕ್ ನಲ್ಲಿ ಹುಲಿ ಎಲ್ಲಿಯೇ ಹೋದರೂ ಅಲ್ಲಿ ಮೇಕೆ ಹಿಂಬಾಲಿಸಿಕೊಂಡು ಹೋಗುತ್ತಿದೆ. ಮೇಕೆ ಮತ್ತು ಹುಲಿಯ ಸ್ನೇಹ ಅಲ್ಲಿನ ಸಿಬ್ಬಂದಿಗಳಿಗೆ ಬೆರಗುಂಟು ಮಾಡಿದೆ. ಹುಲಿ ಹಾಗೂ ಮೇಕೆಯ ಸ್ನೇಹವನ್ನು ಕಂಡ ಅಲ್ಲಿನ ಸಿಬ್ಬಂದಿ ಇದೀಗ ಮೇಕೆಗೆ ತೀಮೂರ್ ಎಂದು ಹೆಸರಿಟ್ಟಿದ್ದಾರೆ. ಪ್ರಾಣಿಗಳಿಗೆ ಊಟ, ನೀರು, ಜಾಗವಿದ್ದರೆ ಸಾಕು. ಅವುಗಳಿಗೆ ಬೇರೇನೂ ಬೇಡ ಎಂಬ ಆಲೋಚನೆಯಲ್ಲಿರುವವರರಿಗೆ ಈ ಅಪರೂಪದ ಘಟನೆಯೊಂದು ಪ್ರಾಣಿಗಳಿಗೂ ಸ್ನೇಹ ಹಾಗೂ ಪ್ರೀತಿ ಅಗತ್ಯವಿದೆ ಎಂಬ ಸತ್ಯವನ್ನು ಸಾರುತ್ತಿದೆ.

Write A Comment