ಕರ್ನಾಟಕ

ಅನುದಾನರಹಿತ ಶಾಲಾ ಶಿಕ್ಷಕರಿಗೆ; ‘ಜ್ಯೋತಿ ಸಂಜೀವಿನಿ ಯೋಜನೆಯ ಸೌಲಭ್ಯಕ್ಕೆ ಪರಿಶೀಲನೆ’: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

sidduಬೆಂಗಳೂರು, ನ.26: ರಾಜ್ಯ ಸರಕಾರ ಜ್ಯೋತಿ ಸಂಜೀವಿನಿ ಯೋಜನೆಯ ಸೌಲಭ್ಯವನ್ನು ಅನುದಾನರಹಿತ ಶಾಲಾ ಶಿಕ್ಷಕರಿಗೂ ಒದಗಿಸುವ ಸಂಬಂಧ ಪರಿಶೀಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಪಕ್ಷದ ಸದಸ್ಯ ಪುಟ್ಟಣ್ಣ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳನ್ನು ಪಡೆದವರಿಗೆ ಈಗಾಗಲೇ ಜ್ಯೋತಿ ಸಂಜೀವಿನಿ ಯೋಜನೆಯ ಸೌಲಭ್ಯವನ್ನು ಒದಗಿಸಲಾಗಿದ್ದು, ಈ ಸೌಲಭ್ಯವನ್ನು ಪಡೆಯದ ಅನುದಾನರಹಿತ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆಯ ಸೌಲಭ್ಯವನ್ನು ನೀಡುವ ಸಂಬಂಧ ಪರಿಶೀಲಿಸುತ್ತೇನೆ ಎಂದು ಹೇಳಿದರು.

ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಈಗಾಗಲೇ ಜ್ಯೋತಿ ಸಂಜೀವಿನಿ ಯೋಜನೆಯ ಸೌಲಭ್ಯವನ್ನು ಒದಗಿಸಲಾಗಿದ್ದು, ಈ ಯೋಜನೆಯಡಿಯಲ್ಲಿ ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ನರರೋಗ, ಗಂಭೀರ ಸ್ವರೂಪದ ಅಪಘಾತ, ಸುಟ್ಟ ಗಾಯ ಮತ್ತು ನವಜಾತ ಶಿಶು, ಚಿಕ್ಕ ಮಕ್ಕಳ ಕಾಯಿಲೆಗಳಿಗೆ ಸಂಬಂಧಿಸಿದಂತೆ 572 ವಿಧದ ಶಸ್ತ್ರ ಚಿಕಿತ್ಸೆ, ವೈದ್ಯಕೀಯ ಸೌಲಭ್ಯಗಳನ್ನು ನಗದುರಹಿತವಾಗಿ ಒದಗಿಸಲಾಗುತ್ತಿದೆ ಎಂದು ಹೇಳಿದರು.

Write A Comment