ಕರ್ನಾಟಕ

ಉಪ ಲೋಕಾಯುಕ್ತ ಪದಚ್ಯುತಿ; ಕಾಂಗ್ರೆಸ್ ಶಾಸಕಾಂಗ ಪಕ್ಷದ ಬೆಂಬಲ

Pinterest LinkedIn Tumblr

CM Siddaramaiah addressing the Congress Legislative party meet while Ministers Dr G Parameshwar,TB Jayachandra and others look on at Conference Hall, Vidhana Soudha in Bengaluru on Thursday Nov 26 2015 - KPN ### CLP Meeting at Vidhana Soudha

ಬೆಂಗಳೂರು, ನ.26: ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಪದಚ್ಯುತಿ ನಿರ್ಣಯಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಬೆಂಬಲ ಪಡೆಯುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಮೊಗ್ಗ ಶಾಸಕ ಪ್ರಸನ್ನಕುಮಾರ್ ಉಪಲೋಕಾಯುಕ್ತ ಪದಚ್ಯುತಿ ನಿರ್ಣಯದ ವಿಷಯ ಪ್ರಸ್ತಾಪ ಮಾಡಿದರು. ಈ ಸಂಬಂಧ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ. ಶಾಸಕರ ಒಪ್ಪಿಗೆ ಇಲ್ಲದೆ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಮಾಡಿದ್ದರ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಪದಚ್ಯುತಿ ನಿರ್ಣಯ ಮಂಡನೆ ಮಾಡಿದ ಬಗ್ಗೆ ಕೆಲವು ಶಾಸಕರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ಉಪಲೋಕಾಯುಕ್ತರು ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಪ್ರಕರಣವೊಂದು ದಾಖಲೆಗಳ ಸಹಿತ ಸಿಕ್ಕಿರುವುದರಿಂದ ಶಾಸಕ ಪ್ರಸನ್ನಕುಮಾರ್ ಈ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಆ ದಾಖಲೆಗಳನ್ನು ಈಗಾಗಲೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ ನಂತರ ಶಾಸಕರು ಸಮಾಧಾನಗೊಂಡರು ಎಂದು ಹೇಳಲಾಗಿದೆ. ನಂತರ, ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆಯನ್ನು ನಡೆಸಲಾಗಿದೆ.

25 ಸ್ಥಾನಗಳ ಪೈಕಿ ಕನಿಷ್ಠ 16 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗಿದೆ. ಆದುದರಿಂದ, ಶಾಸಕರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದ ಕುರಿತು ಶಾಸಕರಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

ವಿಧಾನ ಮಂಡಲ ಅಧಿವೇಶನಕ್ಕೆ ಮುನ್ನ ನಡೆಯಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಸಭೆ, ವಿಧಾನ ಮಂಡಲ ಅಧಿವೇಶನ ಮುಕ್ತಾಯವಾಗುವ ಹಿಂದಿನ ದಿನ ನಡೆಯಿತು. ಬೆಳಗ್ಗೆ 9 ಗಂಟೆಗೆ ಆರಂಭವಾದ ಸಭೆಗೆ ಆರಂಭದಲ್ಲಿ ಹಾಜರಾಗಿದ್ದು ಕೇವಲ 45 ಶಾಸಕರು ಮಾತ್ರ. ಅಂಬರೀಷ್ ಸೇರಿದಂತೆ ಪ್ರಮುಖ ಸಚಿವರ ಗೈರು ಹಾಜರಿಯೂ ಎದ್ದು ಕಾಣುತ್ತಿತ್ತು.

ಅಂಬರೀಷ್ ಕಾರ್ಯವೈಖರಿಗೆ ಅಸಮಾಧಾನ: ಶಾಸಕಾಂಗ ಸಭೆಯಲ್ಲಿ ವಸತಿ ಸಚಿವ ಅಂಬರೀಷ್ ಅವರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ. ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳ ಹಂಚಿಕೆ ತೃಪ್ತಿಕರವಾಗಿ ನಡೆದಿಲ್ಲ ಇದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾ ವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಗಳ ಹಂಚಿಕೆ ಕಾರ್ಯದಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸುವುದಾಗಿ ಸಿದ್ದರಾಮಯ್ಯ ಶಾಸಕರಿಗೆ ಭರವಸೆ ನೀಡಿದ್ದಾರೆ.

Write A Comment