ಕರ್ನಾಟಕ

ಸಂವಿಧಾನ ಸಮರ್ಪಣಾ ದಿನ; ಸಂವಿಧಾನವೇ ಪ್ರತಿಯೊಬ್ಬರ ಧರ್ಮ, ಬೇರೆ ಧರ್ಮದ ಅಗತ್ಯವಿಲ್ಲ: ಚಂಪಾ

Pinterest LinkedIn Tumblr

Well known author H Chandrashekar Patil seen along with others during the Constitution Day celebration by Karnataka Dalita Sangharsha Samiti at NGO Hall, Cubbon Park in Bengaluru on Thursday Nov 26 2015 - KPN ### Constitution Day celebration by KDSS

ಬೆಂಗಳೂರು, ನ. 26: ದೇಶ ಬಿಟ್ಟು ಹೋಗುವ ವಿಚಾರ ಬಂದರೆ, ಮೊದಲು ಬ್ರಾಹ್ಮಣರು ದೇಶ ಬಿಡಬೇಕು ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಗುರುವಾರ ನಗರದ ಎನ್‌ಜಿಒ ಭವನದಲ್ಲಿ ಏರ್ಪಡಿಸಿದ್ದ, ಪ.ಜಾ-ಪ.ವರ್ಗಗಳು, ಧಾರ್ಮಿಕ ಅಲ್ಪಸಂಖ್ಯಾತರ ಮೀಸಲಾತಿ-ರಾಜಕಾರಣ ಹಾಗೂ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡು ಚಂಪಾ ಮಾತನಾಡಿದರು.

ದೇಶದಲ್ಲಿ ನಡೆಯುವ ಸಮಾಜಘಾತುಕ ಚಟುವಟಿಕೆಗಳ ಬಗ್ಗೆ ಕೆಲವರು ಧ್ವನಿಗೂಡಿಸಿದರೆ, ಅವರನ್ನು ದೇಶ ಬಿಟ್ಟು ಹೋಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ದೇಶ ಬಿಟ್ಟು ಹೋಗುವ ವಿಚಾರ ಬಂದರೆ, ಮೊದಲು ಬ್ರಾಹ್ಮಣರು ದೇಶ ಬಿಡಬೇಕು. ಏಕೆಂದರೆ, ಅವರು ಮೂಲ ಆರ್ಯರಾಗಿದ್ದು, ವಲಸೆ ಬಂದಿದ್ದಾರೆ. ಆದರೆ, ಯಾರೂ ದೇಶ ಬಿಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಹಫ್ತಾ ವಸೂಲಿಯಲ್ಲಿ ಪುರೋಹಿತ ವರ್ಗ:   ಸಾಮಾನ್ಯ ಜನರಿಗೆ ಇಲ್ಲದ ಲೋಕಗಳ ಬಗ್ಗೆ ಹೇಳಿ ಪುರೋಹಿತರು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದ ಚಂಪಾ, ಇಂತಹ ವಸೂಲಿ ಪುರೋಹಿತರು ಎಲ್ಲ ಧರ್ಮಗಳಲ್ಲಿದ್ದು, ಇವರಿಂದ ಸಮಾಜ ಜಾಗೃತಿಯಿಂದ ಇರಬೇಕೆಂದರು.

ಭಾರತದಲ್ಲಿ ಇದೀಗ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಸಮಾನತೆಯಿಂದ ಸ್ವತಂತ್ರವಾಗಿ ಬದುಕುತ್ತಿದ್ದಾರೆ ಎಂಬ ಭರವಸೆ ನನಗಿಲ್ಲ ಎಂದ ಅವರು, ಭಾರತೀಯರಿಗೆ ಯಾವುದೇ ಧರ್ಮದ ಅಗತ್ಯವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೇ ಪ್ರತಿಯೊಬ್ಬರ ಧರ್ಮವಾಗಿದೆ ಎಂದು ತಿಳಿಸಿದರು.

ಬಿಹಾರದ ಫಲಿತಾಂಶ: ಬಿಹಾರ ಚುನಾವಣೆಯ ಫಲಿತಾಂಶ ಜನಪರವಾಗಿದೆ ಎಂದ ಅವರು, ಅಲ್ಲಿನ ಜನರು ಕೋಮುವಾದ ಸಹಿಸುವುದಿಲ್ಲ, ಸಂವಿಧಾನಕ್ಕೆ ಮಾರಕವಾಗಿರುವ ಅಂಶಗಳನ್ನು ವಿರೋಧಿಸುತ್ತೇವೆ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಇದು ಪ್ರತಿ ರಾಜ್ಯದಲ್ಲೂ ವಿಸ್ತಾರಗೊಳ್ಳಬೇಕೆಂದು ನುಡಿದರು.

ವಾರ್ಷಿಕ ಸರಕಾರಿ ರಜೆಗಳು ಅಧಿಕಗೊಂಡಿದ್ದು, ಕೆಲವೊಂದು ಆಚರಣೆಗಳಿಗೆ ರಜೆ ನೀಡುವುದನ್ನು ಕಡಿವಾಣ ಹಾಕಿ ಕಾಯಕ ಹೆಚ್ಚಿಸಬೇಕು ಎಂದು ಚಂಪಾ ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಎಲ್ಲ ಸಮುದಾಯಗಳು ಕಡ್ಡಾಯ ಶಿಕ್ಷಣ ಪಡೆಯಲು ಮುಂದಾಗಬೇಕು. ಆಗ ಮಾತ್ರ ಅಭಿವೃದ್ಧಿ ಹಾಗೂ ಜಾಗೃತಿಗೊಳ್ಳಲು ಸಾಧ್ಯ ಎಂದರು.

ದಲಿತ ಸಮುದಾಯಕ್ಕೆ ಇಂದಿಗೂ ಶಿಕ್ಷಣ, ಸ್ವಾತಂತ್ರ ಸಿಕ್ಕಿಲ್ಲ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ದಲಿತರಿಗೆ ಇನ್ನೂ ಪ್ರತ್ಯೇಕ ರುದ್ರಭೂಮಿ ಇಲ್ಲ. ಹೀಗಾಗಿಯೇ, ರಾಜ್ಯ ಸರಕಾರ ರುದ್ರಭೂಮಿ ಖರೀದಿಗೆ ಅನುದಾನ ಬಿಡುಗಡೆಗೊಳಿಸಿದೆ ಎಂದ ಅವರು, ಸೂರ್ಯ-ಚಂದ್ರ ಇರುವವರೆಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಜೀವಂತವಾಗಿರುತ್ತದೆ ಎಂದು ಹೇಳಿದರು.

ಅಹಿಂದ ರಾಜ್ಯಾಧ್ಯಕ್ಷ ಕೆ.ಮುಕಡಪ್ಪ ಮಾತನಾಡಿ, ರಾಮಾಯಣ-ಮಹಾಭಾರತದಲ್ಲಿ ಮೋಸ-ದೌರ್ಜನ್ಯ ನಡೆದಿದೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಎಂದಿಗೂ ಮೋಸ ದೌರ್ಜನ್ಯ ನಡೆಯುವುದಿಲ್ಲ. ಇಂತಹ ಮಹಾನ್ ವ್ಯಕ್ತಿ ಭಾರತದಲ್ಲಿ ಜನ್ಮ ಪಡೆದಿರುವುದಕ್ಕೆ ಎಲ್ಲರೂ ಹೆಮ್ಮೆ ಪಡಬೇಕೆಂದರು.

ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಒಕ್ಕೂಟ ಕಾರ್ಯಾಧ್ಯಕ್ಷ ಆರ್.ಮೋಹನ್‌ರಾಜ್, ಪ್ರಧಾನ ಕಾರ್ಯದರ್ಶಿ ಬಸವರಾಜ್‌ಕೌತಾಳ್, ಸಂಚಾಲಕರಾದ ಪರಶುರಾಮ, ಎಸ್. ಡಿ.ರಾಯಮಾನೆ, ಪುಷ್ಪಾವತಿ ಹಲಗಿ, ಗ್ಯಾನಪ್ಪ ಬಡಿಗೇರಾ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Write A Comment