ಕರ್ನಾಟಕ

ಅಧಿಕಾರಕ್ಕಾಗಿ ಧರ್ಮದ ಬಳಕೆ ಅಪಾಯಕಾರಿ: ದಿಗ್ವಿಜಯ್‌ಸಿಂಗ್

Pinterest LinkedIn Tumblr

Digvijaya Singh with Minister Roshan Baig, MLA NA Harris, Bollywood Actor Javed Jaffrey, Syed Kirmani and others seen at the “Hussain Day”, Rise against Terror convention at Shia graveyard ground, Hosur road, in Bengaluru on Sunday 22nd November 2015 Pics: www.pics4news.com

ಬೆಂಗಳೂರು, ನ. 22: ರಾಜಕೀಯ ಅಧಿಕಾರಕ್ಕಾಗಿ ಧರ್ಮವನ್ನು ಬಳಕೆ ಮಾಡುವ ಪ್ರವೃತ್ತಿ ದೇಶದ ಬೆಳವಣಿಗೆಗೆ ಅಪಾಯಕಾರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಶಿಯಾ ಈದ್ಗಾ ಆವರಣದಲ್ಲಿ ಶಿಕ್ಷಣ ತಜ್ಞ ಆಗಾ ಸುಲ್ತಾನ್ ಹುಸೈನ್ ದಿನಾಚರಣೆ ಅಂಗವಾಗಿ ‘ಭಯೋತ್ಪಾದನೆ ವಿರುದ್ಧ ಧ್ವನಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅನ್ಯಾಯ, ಅತ್ಯಾಚಾರದ ವಿರುದ್ಧ ಹೋರಾಡುವ ಸಂದೇಶವನ್ನೇ ಎಲ್ಲ ಧರ್ಮಗಳು ಬೋಧಿಸುತ್ತವೆ. ಧರ್ಮವನ್ನು ಸಮಾ ಜದ ಒಳಿತಿಗಾಗಿ ಬಳಸಬೇಕೆ ಹೊರತು, ರಾಜ ಕೀಯವಾಗಿ ಅಧಿಕಾರ ಪಡೆಯಲು ಬಳಸಿ ಕೊಳ್ಳಬಾರದು ಎಂದು ಅವರು ಹೇಳಿದರು.
ಭಾರತವು ಎಲ್ಲ ಧರ್ಮಗಳಿಗೂ ಗೌರವ ನೀಡಿದೆ. ಬಹುಸಂಖ್ಯಾತರ ಕೋಮುವಾದಿತನವು ಅಲ್ಪಸಂಖ್ಯಾತರ ಕೋಮುವಾದಿತನಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹೇಳಿದ್ದರು. ಅಲ್ಪಸಂಖ್ಯಾತರಲ್ಲಿ ಪ್ರೀತಿ, ವಿಶ್ವಾಸದ ಭಾವನೆ ಬೆಳೆಸುವ ಜವಾಬ್ದಾರಿ ಬಹುಸಂಖ್ಯಾತರಾದ ನಮ್ಮ ಮೇಲಿದೆ ಎಂದು ದಿಗ್ವಿಜಯ್‌ಸಿಂಗ್ ತಿಳಿಸಿದರು.
ಧಾರ್ಮಿಕ ಮೂಲಭೂತವಾದಿತನವು ಭಯೋತ್ಪಾದನೆಯ ಉಗಮಕ್ಕೆ ಕಾರಣ ವಾಗುತ್ತದೆ. ಪರಧರ್ಮ ಸಹಿಷ್ಣುತೆಯನ್ನು ನಾವು ಅನುಸರಿಸದಿದ್ದರೆ ಈ ಭಯೋತ್ಪಾದಕ ಚಟುವಟಿಕೆಗಳು ನಮ್ಮ ದೇಶವನ್ನು ಅಪಾಯದ ಅಂಚಿಗೆ ತೆಗೆದುಕೊಂಡು ಹೋಗುತ್ತದೆ. ಆದುದರಿಂದ, ಇಂತಹ ಸಂಗತಿಗಳಿಗೆ ನಾವು ಅವಕಾಶ ಮಾಡಿಕೊಡಬಾರದು ಎಂದು ಅವರು ಮನವಿ ಮಾಡಿದರು.
ಒಂದು ನಿರ್ದಿಷ್ಟ ಸಮುದಾಯವನ್ನು ಭಯೋತ್ಪಾದನೆ ಚಟುವಟಿಕೆಯೊಂದಿಗೆ ಸಂಬಂಧ ಕಲ್ಪಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಷ್ಟ್ರಪಿತ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿಯನ್ನು ಹತ್ಯೆ ಮಾಡಿದ್ದು ಆ ಸಮುದಾಯ(ಮುಸ್ಲಿಮರು)ದವರಲ್ಲ. ಹಿಂದೂ, ಕ್ರೈಸ್ತ, ಸಿಖ್ಖರಲ್ಲೂ ಇಂತಹ ಚಟು ವಟಿಕೆಗಳನ್ನು ಮಾಡುವವರು ಇದ್ದಾರೆ ಎಂದು ಅವರು ಹೇಳಿದರು.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಒಂದೇ ಸಂಘಟನೆಗೆ ಸೇರಿದವರು ಯಾಕಾಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಧರ್ಮವನ್ನು ರಾಜಕೀಯದಿಂದ ದೂರವಿಡ ಬೇಕು. ಅನ್ಯಾಯ, ಅತ್ಯಾಚಾರದ ವಿರುದ್ಧ ಸರ್ವ ಧರ್ಮೀಯರು ಹೋರಾಡಬೇಕು ಎಂದು ದಿಗ್ವಿಜಯ್‌ಸಿಂಗ್ ಕರೆ ನೀಡಿದರು.
ಮಾಜಿ ಸಂಸದ ಹಾಗೂ ಎಐಸಿಸಿ ವಕ್ತಾರ ರಾಜ್‌ಬಬ್ಬರ್ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟ ಆರಂಭಿಸಲು ಮಹಾತ್ಮಗಾಂಧಿಗೆ ಪ್ರೇರಣೆ ನೀಡಿದ್ದು ಇಮಾಮ್ ಹುಸೈನ್. ಕೇವಲ 72 ಮಂದಿಯನ್ನು ಜೊತೆಯಲ್ಲಿಟ್ಟುಕೊಂಡು ಯಝೀದ್‌ನ ವಿರುದ್ಧ ಕರ್ಬಲಾದ ಯುದ್ಧದಲ್ಲಿ ಹುಸೈನ್ ಪಾಲ್ಗೊಂಡರು. ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದಾಗ ಅವರಿಗೆ ಮೊದಲು ಬೆಂಬಲ ನೀಡಿದ್ದು 72 ಮಂದಿ ಎಂಬುದು ಕಾಕತಾಳೀಯ ಎಂದರು.
ಇಸ್ಲಾಮ್ ಧರ್ಮವು ಮಾನವಹಕ್ಕುಗಳ ರಕ್ಷಣೆ, ಹಿಂಸೆ ವಿರುದ್ಧ ಶಾಂತಿಯ ಮೂಲಕ ಹೋರಾಟ, ಬಡವರು, ಅಸಹಾಯಕರಿಗೆ ರಕ್ಷಣೆ ನೀಡುವುದು, ಮಹಿಳೆಯರಿಗೆ ಗೌರವ, ಅವರ ಹಕ್ಕುಗಳನ್ನು ಸಂರಕ್ಷಿಸುವುದನ್ನು ಕಲಿಸುತ್ತದೆ. ಆದರೆ, ಹಿಂಸೆ, ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ ಎಂದು ಅವರು ಹೇಳಿದರು.
ಬಾಲಿವುಡ್ ನಟ ಜಾವೇದ್ ಜಾಫ್ರಿ ಮಾತನಾಡಿ, ಇಸ್ಲಾಮ್ ಧರ್ಮದ ಮೂಲ ಬೋಧನೆಗಳಿಂದ ಸಮಾಜ ವಿಮುಖವಾಗಿದೆ. ಧರ್ಮದ ಹೆಸರಿನಲ್ಲಿ ನಮ್ಮ ನಡುವೆ ವಿಷ ಬೀಜವನ್ನು ಬಿತ್ತುವವರ ಬಗ್ಗೆ ಎಚ್ಚರಿಕೆಯಿಂದಿರಬೇಕು. ನಾನು ಜಾತ್ಯತೀತ ಎಂದು ಸಾಬೀತುಪಡಿಸಲು ಮಂದಿರಕ್ಕೆ ಹೋಗಿ ಆರಾಧನೆ ಮಾಡಬೇಕಾಗಿಲ್ಲ. ನನ್ನ ಧರ್ಮವನ್ನು ಪಾಲಿಸಿಕೊಂಡು ಇತರ ಧರ್ಮದವರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಂಡರೆ ಸಾಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಉಪಾಧ್ಯಕ್ಷ ವೌಲಾನ ಡಾ.ಸಯ್ಯದ್ ಕಲ್ಬೆ ಸಾದೀಕ್ ವಹಿಸಿದ್ದರು. ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಹಜ್ ಸಚಿವ ಆರ್.ರೋಷನ್‌ಬೇಗ್, ಈ ಟಿವಿ ಸಮೂಹದ ಮುಖ್ಯಸ್ಥ ಸತೀಶ್‌ಚಂದ್ರ, ಶಾಸಕ ಎನ್.ಎ.ಹಾರಿಸ್, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್, ವೌಲಾನ ಮಖ್ಸೂದ್ ಇಮ್ರಾನ್, ಯುವ ಕಾಂಗ್ರೆಸ್ ಅಧ್ಯಕ್ಷ ರಿಝ್ವೆನ್ ಅರ್ಶದ್, ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ, ಡಾ.ಪಿ.ಸಿ.ವಿಶ್ವಕರ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಧಾನಪರಿಷತ್ ಚುನಾವಣೆ: ‘ಜೆಡಿಎಸ್ ಜೊತೆ ಮೈತ್ರಿ ನಿರ್ಧಾರವಾಗಿಲ್ಲ’
ಬೆಂಗಳೂರು, ನ.22: ವಿಧಾನಪರಿಷತ್‌ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಈ ಕ್ಷಣದವರೆಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದ ಕುರಿತು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ ಬಳಿಕವಷ್ಟೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ವಿಧಾನಪರಿಷತ್ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಸಲಾಗುವುದು. ನಿಗಮ, ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರ ಪಟ್ಟಿ ಸಿದ್ಧವಾಗಿದ್ದು, ಶೀಘ್ರದಲ್ಲೆ ಪ್ರಕಟಿಸಲಾಗುವುದು ಎಂದು ದಿಗ್ವಿಜಯ್‌ಸಿಂಗ್ ಹೇಳಿದರು.
ಮೈತ್ರಿ ಸೂತ್ರ:  25 ಸ್ಥಾನಗಳ ಪೈಕಿ ಐದು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದು, ಉಳಿದ 20 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ನೀಡುವ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಪ್ರಸ್ತಾಪ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತುಮಕೂರು, ಮೈಸೂರಿನ ಎರಡು ಸ್ಥಾನಗಳ ಪೈಕಿ ಒಂದು, ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಸ್ಥಾನ, ಮಂಡ್ಯ ಹಾಗೂ ಹಾಸನದ ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದು. ಉಳಿದ 20 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುವುದು ಎಂಬ ಸೂತ್ರವನ್ನು ದೇವೇಗೌಡ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇಬ್ಬರು ನಾಯಕರು, ಈ ಸಂದರ್ಭದಲ್ಲಿ ವಿಧಾನಪರಿಷತ್ ಚುನಾವಣೆ ಕುರಿತು ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಆಕಾಂಕ್ಷಿಗಳ ದಂಡು: ವಿಧಾನಪರಿಷತ್ ಚುನಾವಣೆ ಹಾಗೂ ನಿಗಮ, ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರ ನೇಮಕಾತಿ ಸಂಬಂಧ ಚರ್ಚೆ ನಡೆಸಲು ನಗರಕ್ಕೆ ಆಗಮಿಸಿರುವ ದಿಗ್ವಿಜಯ್‌ಸಿಂಗ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಆಕಾಂಕ್ಷಿಗಳ ದಂಡೆ ಕುಮಾರಕೃಪಾ ಅತಿಥಿ ಗೃಹದ ಬಳಿ ಜಮಾಯಿಸಿತ್ತು.

Write A Comment