ಕರ್ನಾಟಕ

ಇನ್ನೆರಡು ದಿನದಲ್ಲಿ ಮತ್ತೆ ಭಾರೀ ಮಳೆ ಸುರಿಯುವ ಮುನ್ಸೂಚನೆ..!

Pinterest LinkedIn Tumblr

rainಬೆಂಗಳೂರು, ನ.19- ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ್ದ ವಾಯುಭಾರ ಕುಸಿತದಿಂದ ತಮಿಳುನಾಡು, ಸೀಮಾಂಧ್ರ ಹಾಗೂ ಕರ್ನಾಟಕದಲ್ಲಿ ಉಂಟಾಗಿರುವ ಮಳೆಯ ಅವಾಂತರ ಮುಗಿಯುವ ಮುನ್ನವೇ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದ್ದು , ಇನ್ನೆರಡು ದಿನದಲ್ಲಿ ಮತ್ತೆ ಭಾರೀ ಮಳೆ ಆರಂಭವಾಗುವ ಮುನ್ಸೂಚನೆಗಳಿವೆ. ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದ್ದು , ಇನ್ನೆರಡು ದಿನದಲ್ಲಿ ತಮಿಳುನಾಡಿನ ಕರಾವಳಿ ತೀರ ಪ್ರದೇಶ ತಲುಪುವ ನಿರೀಕ್ಷೆ ಇದ್ದು, ಭಾರೀ ಮಳೆ ಬೀಳಲಿದೆ.  ಇದರ ಪ್ರಭಾವದಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಕೂಡ ಜಿಟಿ ಜಿಟಿ ಮಳೆ ಮುಂದುವರೆಯುವ ಲಕ್ಷಣಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ಈ ಸಂಜೆಗೆ ತಿಳಿಸಿದರು.

ಈಗಾಗಲೇ ಉಂಟಾಗಿದ್ದ ವಾಯುಭಾರ ಕುಸಿತ ದುರ್ಬಲವಾಗಿದ್ದರೂ ಕೂಡ ಇನ್ನೂ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲೂ ಮಳೆ ಮುಂದುವರೆದಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಜಿಟಿ ಜಿಟಿ ಮಳೆಯ ಅವಾಂತರ ನಿಂತಿಲ್ಲ. ಆದರೂ ಮತ್ತೆ ವಾಯುಭಾರ ಕುಸಿತದ ಪರಿಣಾಮದಿಂದ ಮಳೆ ಬರಲಿದೆ. ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಮತ್ತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರೆಯಲಿದೆ. ರಾಜಧಾನಿ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮುಂದಿನ ವಾರವೂ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ ಎಂದು ಹೇಳಿದರು.

ದಕ್ಷಿಣದಲ್ಲಿ ಅತಿವೃಷ್ಟಿ , ಉತ್ತರದಲ್ಲಿ ಅನಾವೃಷ್ಟಿ :

ಮುಂಗಾರು ವೈಫಲ್ಯದಿಂದ ಬರದ ದವಡೆಗೆ ಸಿಲುಕಿ ನಲುಗುತ್ತಿರುವ ರಾಜ್ಯಕ್ಕೆ ಹಿಂಗಾರಿನಲ್ಲೂ ಕೂಡ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಿಂಗಾರು ಮಳೆಯೂ ಕೈ ಕೊಟ್ಟಿದ್ದು, ಬರದ ಛಾಯೆ ಹಾಗೇ ಮುಂದುವರೆದಿದ್ದರೆ, ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು , ಕೊಯ್ಲಿಗೆ ಬಂದಿದ್ದಂತಹ ರಾಗಿ, ಜೋಳ, ಶೇಂಗಾ ಮತ್ತಿತರ ಬೆಳೆಗಳು ಅತಿವೃಷ್ಟಿಗೆ ಸಿಲುಕಿ ಹಾನಿಯಾಗುತ್ತಿವೆ. ಅ.1ರಿಂದ ನವೆಂಬರ್ 18ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ 182 ಮಿ.ಮೀ ಮಳೆಯಾಗುವುದು ವಾಡಿಕೆ. ಆದರೆ ಈ ಅವಧಿಯಲ್ಲಿ 246 ಮಿ.ಮೀಟರ್‌ನಷ್ಟು ಮಳೆಯಾಗಿದ್ದು , ವಾಡಿಕೆಗಿಂತ ಶೇ.35ರಷ್ಟು ಹೆಚ್ಚು ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಇದೇ ಅವಧಿಯಲ್ಲಿ 132 ಮಿ.ಮೀಟರ್‌ನಷ್ಟು ವಾಡಿಕೆ ಪ್ರಮಾಣದ ಮಳೆಯಾಗಬೇಕಿತ್ತು. ಇದುವರೆಗೂ ಕೇವಲ 60 ಮಿ.ಮೀಟರ್‌ನಷ್ಟು ಮಳೆಯಾಗಿದ್ದು , ಶೇ.55ರಷ್ಟು ಮಳೆ ಕೊರತೆ ಉಂಟಾಗಿದೆ. ಹೀಗಾಗಿ ಮುಂಗಾರು ಮಳೆಯೂ ಕೈ ಕೊಟ್ಟು ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಹೊಸ ದಾಖಲೆ:

ಕಳೆದ 5 ವರ್ಷಗಳಲ್ಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ , ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಮಳೆ ಬಿದ್ದಿದ್ದು , ಹೊಸ ದಾಖಲೆ ನಿರ್ಮಾಣವಾಗಿದೆ ಎಂದು ಶ್ರೀನಿವಾಸ ರೆಡ್ಡಿ ತಿಳಿಸಿದರು. ಕಳೆದ 4 ವರ್ಷದ ಹಿಂದೆಯೂ ಕೂಡ ಇದೇ ಪರಿಸ್ಥಿತಿ ಇದ್ದರೂ ಇಷ್ಟು ಪ್ರಮಾಣದ ಮಳೆ ಬಿದ್ದಿರಲಿಲ್ಲ. ಮತ್ತೆ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇನ್ನಷ್ಟು ಮಳೆ ಬರುವ ಸಂಭವವಿದ್ದು , ಹೊಸ ದಾಖಲೆ ನಿರ್ಮಾಣವಾಗುವ ಸಾಧ್ಯತೆಗಳಿವೆ.

25 ವರ್ಷದ ದಾಖಲೆ:

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಕೊರತೆ ತೀವ್ರವಾಗಿದ್ದು , ಕಳೆದ 25 ವರ್ಷದ ದಾಖಲೆಯನ್ನು ಸರಿಗಟ್ಟಿದೆ ಎಂದು ಶ್ರೀನಿವಾಸ ರೆಡ್ಡಿ ತಿಳಿಸಿದರು. 1989-90ರಲ್ಲಿ ಇದೇ ರೀತಿ ಮಳೆಯ ಅಭಾವ ಉಂಟಾಗಿತ್ತು. ಆನಂತರ ಇಂತಹ ತೀವ್ರ ಸ್ವರೂಪದ ಮಳೆ ಕೊರತೆ ಉಂಟಾಗಿರಲಿಲ್ಲ. ಕಳೆದ 25 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿರುವುದು ಈ ಬಾರಿ ಮಾತ್ರ.  ವಾಯುಭಾರ ಕುಸಿತಗಳು ಒಂದರ ಹಿಂದೆ ಮತ್ತೊಂದರಂತೆ ಉಂಟಾಗುತ್ತಿದ್ದರೂ ಅದರ ಪ್ರಭಾವ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಆಗುತ್ತಿದೆಯೇ ಹೊರತು ಉತ್ತರ ಒಳನಾಡಿನಲ್ಲಿ ಬರ ನೀಗುವಂತಹ ಮಳೆ ಬರುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Write A Comment