ಕರ್ನಾಟಕ

ಸಚಿವರ ಗೈರು ಹಾಜರಿಗೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಗರಂ

Pinterest LinkedIn Tumblr

kagodu

ಬೆಂಗಳೂರು, ನ.19: ವಿಧಾನಸಭೆ ಕಲಾಪಕ್ಕೆ ಸಚಿವರ ಗೈರು ಹಾಜರಿ ಬಿಸಿ-ಬಿಸಿ ಚರ್ಚೆಗೆ ಕಾರಣವಾಯಿತಲ್ಲದೆ, ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನೇರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ಒಗ್ಗಟ್ಟಿನಲ್ಲಿ ಏನೋ ಎಡವಟ್ಟಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ನಿಗದಿತ ಸಮಯಕ್ಕೆ ಸ್ವಲ್ಪ ತಡವಾಗಿ ಕಲಾಪ ಆರಂಭವಾಯಿತು. ಸಭಾಧ್ಯಕ್ಷರು ಆರಂಭದಲ್ಲೇ ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು. ಆದರೆ ಇದಕ್ಕೆ ಉತ್ತರಿಸಲು ಸಚಿವರೇ ಇರಲಿಲ್ಲ. ಬಿಜೆಪಿ ಸದಸ್ಯರಾದ ಶಿಶಿಕಲಾ ಜೊಲ್ಲೆ, ಎಂ.ಎ.ಹ್ಯಾರಿಸ್, ಮಾನಪ್ಪ ಬಿ.ವಜ್ಜಲ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುರಿತು ಪ್ರಶ್ನೆ ಕೇಳಿದರು.

ಆ ಇಲಾಖೆ ಸಚಿವರು ಗೈರು ಹಾಜರಾಗಿದ್ದು, ಡಾ.ಅಶ್ವಥ್ ನಾರಾಯಣ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಕುರಿತು ಪ್ರಶ್ನೆ ಕೇಳಿದರು. ಆದರೆ ಆ ಇಲಾಖೆ ಸಚಿವರೂ ಹಾಜರಿರಲಿಲ್ಲ. ಇದನ್ನು ಗಮನಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಗರಂ ಆಗಿದ್ದಲ್ಲದೆ, ‘ಇದೇನು ತಮಾಷೆಯ ಆಟ ಎಂದು ತಿಳಿದುಕೊಂಡಿದ್ದೀರಾ ನಾನು ಈ ವಯಸ್ಸಿನಲ್ಲೂ ಸರಿಯಾದ ಸಮಯಕ್ಕೆ ಬಂದು ದಿನಪೂರ್ತಿ ಕಲಾಪದಲ್ಲಿ ಕೂರುತ್ತೇನೆ. ನಿಮಗೇನು ಸಮಸ್ಯೆ. ಜೀವನದಲ್ಲಿ ಮಂತ್ರಿಯಾಗುವುದೇ ಪುಣ್ಯ, ಅದರಲ್ಲಿ ಸರಿಯಾಗಿ ಕೆಲಸ ಮಾಡಿ’ ಎಂದು ತರಾಟೆಗೆ ತೆಗೆದುಕೊಂಡರು.

ಇದೇ ಸಮಯದಲ್ಲಿ ಬಿಜೆಪಿ ಪಾಳೆಯದಿಂದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಶಾಸಕರು, ಸಚಿವರ ಗೈರು ಹಾಜರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾರಿಗೆ ಸಚಿವರು ಇರಲಿಲ್ಲ. ಅವರ ಬದಲಾಗಿ ಉತ್ತರಿಸಲು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಎದ್ದುನಿಂತರು. ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಗಳ ಮದುವೆ ಇದ್ದುದರಿಂದ ಅವರು ಬರಲಾಗಲಿಲ್ಲ. ನನಗೆ ಜವಾಬ್ದಾರಿ ವಹಿಸಿದ್ದಾರೆ. ನಾನು ಉತ್ತರ ನೀಡುತ್ತೇನೆ ದಿನೇಶ್ ಗುಂಡೂರಾವ್ ಸಮಜಾಯಿಷಿ ನೀಡಿದರು. ಈ ನಡುವೆ ಮಾತನಾಡಿದ ಬಿಜೆಪಿ ಶಾಸಕ ಸಿ.ಟಿ.ರವಿ, ಸಾರಿಗೆ ಸಚಿವರಿಗೆ ಅಸಮಾಧಾನವಾಗಿದೆ. ಹಾಗಾಗಿ ಅವರು ಕಲಾಪಕ್ಕೆ ಬರಬಾರದು ಎಂದು ನಿರ್ಧರಿಸಿದ್ದಾರೆ. ಸಿಎಂ ವಿರುದ್ಧ ಬಂಡೇಳಲು ಕೆಲ ಸಚಿವರು ತಯಾರಿ ನಡೆಸಿದ್ದಾರೆ ಎಂದರು.

ಬಸವರಾಜ್ ಬೊಮ್ಮಾಯಿ ಮಾತನಾಡಿ, ಸಾರಿಗೆ ಸಚಿವರಿಗೆ ಬೇಜಾರಾಗಿದೆ. ಬೆಂಗಳೂರು ಉಸ್ತುವಾರಿ ಕಿತ್ತುಕೊಂಡಿರುವುದಕ್ಕೆ ಅವರು ಸಿಎಂ ವಿರುದ್ಧ ಅಸಹಕಾರ ಚಳುವಳಿ ಆರಂಭಿಸಿದ್ದಾರೆ. ಬಹುಶಃ ಅವರು ಸದನಕ್ಕೆ ಬರುವುದೇ ಅನುಮಾನ ಎಂದು ವ್ಯಾಖ್ಯಾನಿಸಿದರು.

ಕಲಾಪದಲ್ಲಿ ಸಚಿವರುಗಳಿಲ್ಲ, ಒಟ್ಟಾರೆ ಸರ್ಕಾರವೇ ಇಲ್ಲವಾಗಿದೆ. ಹತ್ತು ನಿಮಿಷ ಕಾಲ ಅಧಿವೇಶನ ಮುಂದೂಡಿ ಸಂಬಂಧಿಸಿದ ಸಚಿವರನ್ನು ಕರೆಸಿ ಎಂದು ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು. ಹಾಸ್ಯ ಮಿಶ್ರಿತ ದಾಟಿಯಲ್ಲಿಯೇ ಸರ್ಕಾರದ ಮೇಲೆ ಮುಗಿಬೀಳುತ್ತಿದ್ದ ಬಿಜೆಪಿ ಶಾಸಕರನ್ನು ಸಮಾಧಾನಪಡಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ದಿನೇಶ್ ಗುಂಡೂರಾವ್ ಅವರಿಗೆ ಸಾರಿಗೆ ಸಚಿವರ ಪರವಾಗಿ ಉತ್ತರ ಹೇಳಲು ಅನುಮತಿ ಕೊಟ್ಟರು. ಬಿಜೆಪಿ ಶಾಸಕರ ಟೀಕೆಗಳಿಗೆ ತಿರುಗೇಟು ನೀಡಿದ ದಿನೇಶ್ ಗುಂಡೂರಾವ್ ನಿಮ್ಮ ಕಾಲದಲ್ಲಿ ಅಧಿವೇಶನವೇ ನಡೆಯುತ್ತಿರಲಿಲ್ಲ. ಅದನ್ನು ನೆನಪು ಮಾಡಿಕೊಳ್ಳಿ ಎಂದು ಟಾಂಗ್ ನೀಡಿದರು. ಹಳೆಯದನ್ನೆಲ್ಲಾ ಕೆಣಕಬೇಡಿ, ಈಗಿನ ಪರಿಸ್ಥಿತಿಯ ಬಗ್ಗೆ ಮಾತನಾಡಿ ಎಂದು ಬಸವರಾಜ್ ಬೊಮ್ಮಾಯಿ ಪ್ರತಿರೋಧಿಸಿದರು. ಮಧ್ಯ ಪ್ರವೇಶಿಸಿದ ಕಾಗೋಡು ತಿಮ್ಮಪ್ಪ ಬಿಸಿ-ಬಿಸಿ ಚರ್ಚೆಗೆ ತೆರೆ ಎಳೆದರು.

Write A Comment