ಕರ್ನಾಟಕ

ಈ ಯುವತಿಯ ಸಾವಿಗೆ ಕಾರಣವಾದ ಬಾಡಿ ಸ್ಪ್ರೇ ! ಏನಾಯಿತು…ಇಲ್ಲಿದೆ ವರದಿ

Pinterest LinkedIn Tumblr

body sp33322

ಚಿಕ್ಕಮಗಳೂರು: ಸಾವಿಗೆ ಸಾವಿರ ದಾರಿ ಎನ್ನುತ್ತಾರೆ. ಆಯಸ್ಸು ಮುಗಿದಿದ್ದರೆ ಹೇಗೆ ಬೇಕಾದರೂ ಸಾವು ಬರಬಹುದು. ಇಲ್ಲೊಬ್ಬ ಯುವತಿ ಪರಿಮಳ ಸೂಸುವ ಬಾಡಿ ಸ್ಪ್ರೇ ಸಾವಿನ ಮನೆ ತೋರಿಸಿದೆ.

ಹೌದು, ಯಾವುದನ್ನು ಎಲ್ಲಿ, ಹೇಗೆ ಬಳಸಬೇಕು ಎಂಬುದರ ಅರಿವಿಲ್ಲದಿದ್ದರೆ ಏನೆಲ್ಲಾ ಅನಾಹುತ ಆಗುತ್ತದೆ ಎಂಬುದಕ್ಕೆ ಈ ಯುವತಿಯ ಸಾವು ಉದಾಹರಣೆಯಾಗಿದೆ. ಚಿಕ್ಕಮಗಳೂರು ತಾಲೂಕು ವಸ್ತಾರೆ ಗ್ರಾಮದ 19 ವರ್ಷದ ಯುವತಿ ವಿ.ಡಿ.ಸುಧಾ ಬಟ್ಟೆಗೆ ಹಾಕಿಕೊಳ್ಳಬೇಕಾದ ಸ್ಪ್ರೇ ಅನ್ನು ಬಾಯಿಗೆ ಹಾಕಿಕೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

ನವೆಂಬರ್ 13ರಂದು ಮೇಕಪ್ ಮಾಡಿಕೊಂಡು ಹೊರಗೆ ಹೋಗಲು ತಯಾರಿ ನಡೆಸುತ್ತಿದ್ದ ಸುಧಾ ಬಟ್ಟೆಗೆ ಹಾಕಿಕೊಳ್ಳುವ ಬಾಡಿ ಸ್ಪ್ರೇಯನ್ನು ಬಾಯಿಗೆ ಸ್ಪ್ರೇ ಮಾಡಿಕೊಂಡಿದ್ದಳು. ಬಾಯಿ ಮೂಲಕ ಸ್ಪ್ರೇ ಹೊಟ್ಟೆಗೆ ಸೇರಿದ್ದು, ಕ್ಷಣಮಾತ್ರದಲ್ಲೇ ತಡೆಯಲಾರದೇ ಹೊಟ್ಟೆನೋವು ಆರಂಭವಾಗಿದೆ.

ಸುಧಾ ಕಿರುಚಾಡುವುದನ್ನು ಕೇಳಿಕೊಂಡು ಓಡಿ ಬಂದ ಹೆತ್ತವರು ಹೊತ್ತು ತಂದು ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆಗೆ ಯುವತಿಯು ಸ್ಪಂದಿಸಲಿಲ್ಲ. ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ.

ಯುವತಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ಹೆತ್ತವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೊತ್ತೊಯ್ದರು. ಆದರೆ ಸುಧಾ ಸಾವಿನ ದವಡೆಯಿಂದ ಪಾರಾಗಲು ಸಾಧ್ಯವೇ ಆಗಲಿಲ್ಲ. ಚಿಕಿತ್ಸೆ ಫಲಿಸದೇ ಸೋಮವಾರ ರಾತ್ರಿ ಸುಧಾ ಸಾವನ್ನಪ್ಪಿದ್ದಾಳೆ. ಬಾಯಿಯೂ ಸುವಾಸನೆ ಬೀರಲಿ ಎಂಬ ಯುವತಿಯ ದೂರಾಲೋಚನೆ ಆಕೆಗೆ ದುರ್ಮರಣವನ್ನೇ ತಂದಿಟ್ಟಿತು.

Write A Comment