ಕರ್ನಾಟಕ

ಪತ್ರಿಕೆ, ಸುದ್ದಿವಾಹಿನಿಗಳನ್ನು ಬ್ಯಾನ್ ಮಾಡಿ ಎಂದ ಈಶ್ವರಪ್ಪ; ಬೇಜವಾಬ್ದಾರಿ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ವಿರೋಧ

Pinterest LinkedIn Tumblr

Eshwarappa

ಬೆಂಗಳೂರು: ರಾಜ್ಯದಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನಂಪ್ರತಿ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಇಂತಹ ಸುದ್ದಿಗಳೇ ತುಂಬಿರುತ್ತವೆ. ಹೀಗಾಗಿ ಪತ್ರಿಕೆಗಳನ್ನು ಮತ್ತು ಸುದ್ದಿವಾಹಿನಿಗಳನ್ನು ನಿಷೇಧಿಸಬೇಕು ಎಂದು ವಿಧಾನಪರಿಷತ್ ನ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಾಜ್ಯದಲ್ಲಿ ಹಾಡಹಗಲೇ ಕಳ್ಳರಿಂದ ಪೊಲೀಸರ ಕೊಲೆ ನಡೆದಿದೆ. ಅತ್ಯಾಚಾರ ಎನ್ನುವುದು ಸರಾಗವಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟದಂತೆ ರೇಪ್ ರಾಜ್ಯದಲ್ಲಿ ಸರಾಗವಾಗಿ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅಸಮಾಧಾನ ವ್ಯಕ್ತಪಡಿಸಿ ನ.7ರಂದು ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತಂತೆ ವರದಿ ನೀಡುವಂತೆ ಸರ್ಕಾರವನ್ನು ಕೇಳಿದ್ದರು. ಆದರೆ ರಾಜ್ಯ ಸರ್ಕಾರ ರಾಜ್ಯಪಾಲರ ಪತ್ರಕ್ಕೆ ಉತ್ತರ ಕೊಟ್ಟಿದೆಯಾ? ರಾಜ್ಯದಲ್ಲಿ ಸರ್ಕಾರ ಇದೆಯೇ? ಎಂದು ಪ್ರಶ್ನಿಸಿದರು.

ಬುಧವಾರ ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಗದ್ದಲ ಆರಂಭವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸಲು ಅನುಮತಿ ನೀಡುವಂತೆ ಸಭಾಪತಿ ಡಿಎಚ್ ಶಂಕರಮೂರ್ತಿ ಅವರಲ್ಲಿ ಈಶ್ವರಪ್ಪ ಅನುಮತಿ ಕೇಳಿದ್ದರು.

ಟಿವಿ ಪತ್ರಿಕೆಗಳನ್ನು ಬ್ಯಾನ್ ಮಾಡಿ
ಇದೇ ವೇಳೆ ಮಾಧ್ಯಮಗಳು ಮತ್ತು ದಿನ ಪತ್ರಿಕೆಗಳ ವಿರುದ್ಧ ಹರಿಹಾಯ್ದ ಈಶ್ವರಪ್ಪ ದಿನಂಪ್ರತಿ ಟಿವಿ ಚಾನೆಲ್, ಪತ್ರಿಕೆಗಳಲ್ಲಿನ ವರದಿ ಕಣ್ಣಲ್ಲಿ ನೋಡಲಾಗ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಟಿವಿ ಚಾನೆಲ್ ಗಳನ್ನು, ದಿನ ಪತ್ರಿಕೆಗಳನ್ನು ಬ್ಯಾನ್ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಪತ್ರಿಕೆ ಹಾಗೂ ಮಾಧ್ಯಮಗಳ ಮೇಲೆ ನಿಷೇಧ ಹೇರುವುದರಿಂದ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು. ಈಶ್ವರಪ್ಪ ಅವರ ಈ ಬೇಜವಾಬ್ದಾರಿ ಹೇಳಿಕೆಗೆ ಇದೀಗ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಸರ್ಕಾರವನ್ನು ಟೀಕಿಸುವ ಭರದಲ್ಲಿ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋಧ್ಯಮವನ್ನು ಈಶ್ವರಪ್ಪ ಟೀಕಿಸಿರುವುದು ಖಂಡನೀಯವಾಗಿದೆ.

ಈ ಹಿಂದೆಯೂ ಕೂಡ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಈಶ್ವರಪ್ಪ, ಪತ್ರಕರ್ತೆಯೊಬ್ಬರ ಮೇಲೆ ಅತ್ಯಾಚಾರವಾದರೆ ನಾವೇನು ಮಾಡಲು ಸಾಧ್ಯ ಎಂಬಂತಹ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿ ಕ್ಷಮೆ ಯಾಚಿಸಿದ್ದರು. ಪ್ರತಿಪಕ್ಷ ಸ್ಥಾನದಂತಹ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿಯೇ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವಾಗ ಇಂತಹ ಜನಪ್ರತಿನಿಧಿಗಳಿಂದ ಜನತೆ ಇಂತಹ ವಿವಾದಾತ್ಮಕ ಹೇಳಿಕೆಗಳಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ.

ಕಾನೂನು ಸುವ್ಯವಸ್ಥೆ ಎಂಬುದು ಮಾಧ್ಯಮ ಅಥವಾ ಪತ್ರಿಕೆಗಳ ಬಳಿ ಅಲ್ಲ, ಸರ್ಕಾರದ ಕೈಯಲ್ಲಿರುತ್ತದೆ ಎಂಬ ಕನಿಷ್ಟ ಜ್ಞಾನ ಕೂಡ ಇಲ್ಲದೆ ಮಾಧ್ಯಮಗಳನ್ನು ದೂಷಿಸುತ್ತಿರುವ ಈಶ್ವರಪ್ಪನವರಿಗೆ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋಧ್ಯಮವನ್ನು ನಿಷೇಧಿಸುವುದು ಅಸಾಧ್ಯ ಎಂಬ ಅಂಶ ತಿಳಿದಿದೆಯೋ ಇಲ್ಲವೋ ಎಂಬ ಪ್ರಶ್ನೆ ಮೂಡುತ್ತಿದೆ.

Write A Comment