ಕರ್ನಾಟಕ

ಶ್ರೀಗಂಧದ ಮರ ಮಾರಾಟಕ್ಕೆ ವ್ಯವಸ್ಥೆ: ಜಿ.ಎಂ.ಸಿದ್ದೇಶ್ವರ್

Pinterest LinkedIn Tumblr

sandal_fiಬೆಂಗಳೂರು,ನ.7: ರೈತರು ಬೆಳೆಯುವಂತಹ ಶ್ರೀಗಂಧದ ಮರಗಳನ್ನು ಮಾರಾಟಮಾಡಲು ಸರಕಾರ ಸೂಕ್ತವಾದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್ ಸಲಹೆ ನೀಡಿದ್ದಾರೆ.

ಶನಿವಾರ ಮಲ್ಲೇಶ್ವರಂನ ಅರಣ್ಯಭವನದಲ್ಲಿ ಸ್ಯಾಂಡಲ್‌ವುಡ್ ಸೊಸೈಟಿ ಆಫ್ ಇಂಡಿಯಾ ಹಾಗೂ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಹಮ್ಮಿಕೊಂಡಿದ್ದ ಶ್ರೀಗಂಧ ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಗಂಧದ ಮರ ಬೆಳೆದರೂ ರೈತ ನಿಗದಿತ ಸಮಯಕ್ಕೆ ಸರಿಯಾಗಿ ಕಟಾವು ಮಾಡಿ ಮಾರಾಟ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಇದಕ್ಕೆ ಸೂಕ್ತ ಭದ್ರತೆ ಒದಗಿಸಲು ಮುಂದಾಗಬೇಕು ಎಂದು ಅವರು ಹೇಳಿದರು.

ರೈತ ಇಂದು ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಶ್ರೀಗಂಧದ ಮರ ಗಳನ್ನು ಬೆಳೆಯುತ್ತಿದ್ದಾನೆ. ಆದರೆ ಅದನ್ನು ಕಟಾವು ಮಾಡಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಕಳ್ಳಕಾಕರ ಕಣ್ಣು ಬೀಳುತ್ತಿರುವುದರಿಂದ ಅಭದ್ರತೆ ಸೃಷ್ಟಿಯಾಗಿದೆ. ಆದುದರಿಂದ, ಸರಕಾರ ರೈತರು ಹಾಗೂ ಶ್ರೀಗಂಧದ ಮರಗಳಿಗೆ ಭದ್ರತೆ ಒದಗಿ ಸಬೇಕು ಎಂದು ಸಿದ್ದೇಶ್ವರ್ ತಿಳಿಸಿದರು.
ರೈತರು ಅಧಿಕಾರಿಗಳು, ನ್ಯಾಯಾಧೀಶರ ಮನೆಯ ಮುಂದೆ ಶ್ರೀಗಂಧ ಬೆಳೆದರೂ ಕಳ್ಳರು ಯಾರ ಭಯವಿಲ್ಲದೆ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಮತ್ತೊಂದೆ ಡೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾದರೆ ಅರಣ್ಯಾಧಿಕಾರಿಗಳು ನೂರೆಂಟು ಕಾನೂನು ವಿಧಿಸಿ, ರೈತರನ್ನು ಅಧೀರರನ್ನಾಗಿಸುತ್ತಾರೆ ಎಂದು ಅವರು ಕಿಡಿಕಾರಿದರು.
ರೈತ ತಾನು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ಮಾರಾಟಮಾಡುವವರ ಕೈಯಲ್ಲಿ ಮಾರುಕಟ್ಟೆ ಇರಬೇಕಿತ್ತು. ಆದರೆ ದಲ್ಲಾಳಿಗಳು ಮಾರುಕಟ್ಟೆ ಗಳನ್ನು ನಿಯಂತ್ರಿಸುತ್ತಿರುವುದರಿಂದ ರೈತರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ನ್ಯಾಯ ಒದಗಿಸಲು ವಿಫಲವಾಗಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಾಳೆ ಅನ್ನ ದಾತ ಸಿಡಿದೇಳುವ ದಿನ ದೂರ ಇಲ್ಲ ಎಂದು ಸಿದ್ದೇಶ್ವರ್ ಎಚ್ಚರಿಕೆ ನೀಡಿದರು.

Write A Comment