ಬೆಂಗಳೂರು, ನ.4: ರಾಜ್ಯದಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಮುಖ ಸಂಸ್ಥೆಗಳಿದ್ದು ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟಿದೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳು ಲಭ್ಯವಾಗುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಭಾರತ-ಅಮೆರಿಕ ವಿಮಾನಯಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, 1940ರಲ್ಲೇ ರಾಜ್ಯದಲ್ಲಿ ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಸಂಸ್ಥೆ ವಿಮಾನದ ತಯಾರಿಕೆ ಆರಂಭ ಮಾಡಿತ್ತು. ನಂತರದ ದಿನಗಳಲ್ಲಿ ಆ ಸಂಸ್ಥೆ ರಾಷ್ಟ್ರೀಕರಣಗೊಂಡು ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್(ಎಚ್‌ಎಎಲ್) ಆಗಿ ಪರಿವರ್ತನೆಯಾಯಿತು ಎಂದರು.
ವಿಮಾನಯಾನ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಗ್ಯಾಸ್‌ಟರ್ಬೈನ್ ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ವಾಯುಯಾನ ಪ್ರಯೋಗಾಲಯ, ಡಿಆರ್‌ಡಿಒ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳು ರಾಜ್ಯದಲ್ಲಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮವಾದ ವಾತಾವರಣವಿದ್ದು, ಕೌಶಲಭರಿತ ಉದ್ಯೋಗಿಗಳು, ಕಾರ್ಮಿಕರು ಲಭ್ಯವಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ 2013-23ರ ಏರೋಸ್ಪೇಸ್ ನೀತಿಯನ್ನು ನಮ್ಮ ಸರಕಾರ ರೂಪಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ದೇಶದ ವಾಯುಯಾನ ಕ್ಷೇತ್ರದ ಉತ್ಪಾದನೆಯಲ್ಲಿ ಕರ್ನಾಟಕವು ಶೇ.55ರಷ್ಟು ಪಾಲು ಹೊಂದಿದ್ದು, ನಮ್ಮ ರಾಜ್ಯದಲ್ಲಿ 200 ಎಂಜಿನಿಯರಿಂಗ್, 114 ವೈದ್ಯಕೀಯ ಕಾಲೇಜು, 22 ವಿಶ್ವವಿದ್ಯಾನಿಲಯಗಳು, 13 ಅಂತಾರಾಷ್ಟ್ರೀಯ ಶಾಲೆಗಳಿವೆ. ಇನ್ಫೋಸಿಸ್, ಟಾಟಾ ಕನ್ಸಲ್ಟಂಟ್ ಸರ್ವಿಸಸ್, ಓರಾಕಲ್, ಸೆಲ್, ಐಬಿಎಂ, ಮೈಕ್ರೊಸಾಫ್ಟ್‌ನಂತಹ ದೊಡ್ಡ ಕಂಪೆನಿಗಳು ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ನರಸಾಪುರ, ವೇಮಗಲ್, ಗೌರಿಬಿದನೂರು, ದಾಬಸ್‌ಪೇಟೆ, ಮಮ್ಮುಗಡ್ಡಿ, ತಿಪಟೂರು ಸೇರಿದಂತೆ ಹಲವೆಡೆ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ನರಸಾಪುರದಲ್ಲಿ 12,500 ಎಕರೆ ಪ್ರದೇಶದಲ್ಲಿ ಉತ್ಪಾದನಾ ವಲಯ ಸ್ಥಾಪನೆ ಮಾಡಲಾಗುತ್ತಿದೆ. ಏರೋಸ್ಪೇಸ್‌ಗಾಗಿ ದೇವನಹಳ್ಳಿ ಬಳಿ 984 ಎಕರೆ ಕಾಯ್ದಿರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ದೇಶದಲ್ಲೆ ಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಖಾಸಗಿ ಸಹಭಾಗಿತ್ವದ ಏರೋಸ್ಪೇಸ್ ವಿಶೇಷ ವಿತ್ತ ವಲಯವನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯದಲ್ಲಿ 15 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, 2017ರ ವೇಳೆಗೆ ವಿದ್ಯುತ್ ಸ್ವಾವಲಂಬಿ ರಾಜ್ಯವಾಗುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ರೈಲು, ರಸ್ತೆ, ವಿಮಾನ ಸಂಪರ್ಕಗಳು ರಾಜ್ಯದಲ್ಲಿ ಉತ್ತಮವಾಗಿವೆ. ಬೆಂಗಳೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಒಳಗೊಂಡಂತೆ ಹುಬ್ಬಳ್ಳಿ, ಮೈಸೂರು, ಬೆಳಗಾವಿ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಹಾಸನ, ಬಳ್ಳಾರಿ, ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಶೀಘ್ರವೇ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ಭರವಸೆ ನೀಡಿದರು.
ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಸೇರಿದಂತೆ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ರಾಜ್ಯ ಸರಕಾರ ಇ-ಉದ್ಯಮ ಸೌಲಭ್ಯವನ್ನು ಆರಂಭಿಸಿದ್ದು, ಎಲ್ಲ ಅನುಕೂಲತೆಗಳನ್ನೂ ಒಂದೆ ವೇದಿಕೆಯಲ್ಲಿ ಕಲ್ಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಅಮೆರಿಕ ಹಾಗೂ ಭಾರತದ ನಡುವೆ ಮತ್ತಷ್ಟು ವಿಮಾನಯಾನ ಸೇವೆ ಹೆಚ್ಚಿಸುವುದರಿಂದ ಎರಡು ದೇಶಗಳ ಆರ್ಥಿಕ ವ್ಯವಹಾರಗಳ ಅಭಿವೃದ್ಧಿ ತೀವ್ರಗೊಳ್ಳುತ್ತದೆ. ಬೆಂಗಳೂರು ನಗರವು ಭಾರತದ ವಾಯುಯಾನ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಸ್ಥಳೀಯ ನಗರಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲೂ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರಿ ರಿಚರ್ಡ್ ರಾಹುಲ್ ವರ್ಮ ಸೇರಿದಂತೆ ಅನೇಕ ಉದ್ಯಮಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.