ರಾಷ್ಟ್ರೀಯ

ಫೋಕ್ಸ್‌ವ್ಯಾಗನ್‌ಗೆ ನೋಟಿಸ್

Pinterest LinkedIn Tumblr

VVVಹೊಸದಿಲ್ಲಿ, ನ.4: ಭಾರತದಲ್ಲಿ ಮಾರಾಟವಾಗುವ ಫೋಕ್ಸ್ ವ್ಯಾಗನ್ ವಾಹನಗಳ ಹೊಗೆಮಾಲಿನ್ಯದ ಮಟ್ಟದಲ್ಲಿ ಪ್ರಯೋಗಾಲಯದ ನಿಗದಿತ ಮಾನದಂಡಕ್ಕಿಂತ ಗಣನೀಯ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಬುಧವಾರ ಫೋಕ್ಸ್ ವ್ಯಾಗನ್ ಕಂಪೆನಿಗೆ ನೋಟಿಸ್ ಜಾರಿಗೊಳಿಸಿದೆ.

ಕಂಪೆನಿಯು ಮಾರಾಟ ಮಾಡುತ್ತಿರುವ ಜೆಟ್ಟಾ, ಆಡಿಎ4 ಹಾಗೂ ವೆಂಟೊ ಮಾಡೆಲ್‌ನ ಡೀಸೆಲ್ ಕಾರುಗಳ ಹೊಗೆಮಾಲಿನ್ಯ ಮಟ್ಟವು ನಿಗದಿತ ಮಾನದಂಡಕ್ಕಿಂತ ಹೆಚ್ಚಿರುವುದನ್ನು ರಸ್ತೆ ಸಾರಿಗೆ ಮಾಲಿನ್ಯ ತಪಾಸಣಾ ಸಂಸ್ಥೆ ‘ಎಆರ್‌ಎಐ’ ಪತ್ತೆಹಚ್ಚಿರುವ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ.

‘‘ಜೆಟ್ಟಾ, ಆಡಿ ಎ4 ಹಾಗೂ ವೆಂಟೊ ಮಾಡೆಲ್‌ಗಳ ಡೀಸೆಲ್ ವಾಹನಗಳ ಹೊಗೆಮಾಲಿನ್ಯ ಮಟ್ಟದಲ್ಲಿ ಗಣನೀಯ ವ್ಯತ್ಯಾಸಗಳು ಕಂಡುಬಂದಿವೆ. ಈ ಬಗ್ಗೆ ನೀಡಲಾದ ನೋಟಿಸ್‌ಗೆ ಉತ್ತರಿಸಲು ಫೋಕ್ಸ್ ವ್ಯಾಗನ್ ಕಂಪೆನಿಗೆ 15-21 ದಿನಗಳ ಕಾಲಾವಕಾಶ ನೀಡಿದ್ದೇವೆ’’ ಎಂದು ಭಾರೀ ಕೈಗಾರಿಕೆಗಳ ಸಚಿವಾಲಯದ ಹೆಚ್ಚು ವರಿ ಕಾರ್ಯದರ್ಶಿ ಅಂಬುಜ್ ಶರ್ಮಾ ತಿಳಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಫೋಕ್ಸ್ ವ್ಯಾಗನ್ ಕಂಪೆನಿಯು ಜರ್ಮನಿಯಲ್ಲಿರುವ ತನ್ನ ಮುಖ್ಯ ಕಾರ್ಯಾ ಲಯದಿಂದ ವಿಸ್ತೃತವಾದ ತಾಂತ್ರಿಕ ವಿವರಗಳೊಂದಿಗೆ ನೋಟಿಸ್‌ಗೆ ಉತ್ತರಿಸಲಿದೆಯೆಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಜರ್ಮನಿಯ ಪ್ರಸಿದ್ಧ ಕಾರು ತಯಾರಕ ಸಂಸ್ಥೆ ಫೋಕ್ಸ್‌ವ್ಯಾಗನ್‌ಗೆ ವಾಹನಗಳಲ್ಲಿ ಹೊಗೆ ಮಾಲಿನ್ಯವನ್ನು ಮರೆಮಾಚಲು ಸಾಫ್ಟ್‌ವೇರ್ ಅಳವಡಿಸಿದ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭಾರತದಲ್ಲಿ ಕಳೆದ ತಿಂಗಳು ರಸ್ತೆ ಸಾರಿಗೆ ಮಾಲಿನ್ಯ ತಪಾಸಣಾ ಸಂಸ್ಥೆ ಎಆರ್‌ಎಐ ತನಿಖೆಯನ್ನು ಆರಂಭಿಸಿತ್ತು. ಮಂಗಳವಾರ ಎಆರ್‌ಎಐ ತನ್ನ ವರದಿಯನ್ನು ಭಾರೀ ಕೈಗಾರಿಕೆಗಳ ಸಚಿವಾಲಯಕ್ಕೆ ಸಲ್ಲಿಸಿತ್ತು.

Write A Comment