ಕರ್ನಾಟಕ

ಹೆಚ್ಚುತ್ತಿರುವ ಅಸಹಿಷ್ಣುತೆ : ಬಂಡವಾಳ ಹೂಡಿಕೆಗೂ ಹಿನ್ನಡೆ

Pinterest LinkedIn Tumblr

para

ಬೆಂಗಳೂರು, ನ.4-ಭಾವನಾತ್ಮಕ  ವಿಷಯಗಳ ಆಧರಿಸಿ ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಉಂಟಾಗಿರುವ  ವಿಚಾರ  ವಿದೇಶದಲ್ಲಿ  ಅಪಕೀರ್ತಿಗೆ ಒಳಗಾಗಿದ್ದು ಬಂಡವಾಳ ಹೂಡಿಕೆದಾರರು ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಜರ್ಮನ್‌ನ ಕೈಗಾರಿಕೋದ್ಯಮಿಗಳ ನಿಯೋಗ ಭೇಟಿ ಮಾಡಿದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಹಾರ ಪದ್ಧತಿ ಕುರಿತು ಸೃಷ್ಟಿಸಿರುವ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳಿಂದಾಗಿ ಇಂದು ದೇಶದಲ್ಲಿ ಅಸಹಿಷ್ಣುತೆ ಉಂಟಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಆತಂಕ ಉಂಟು ಮಾಡಿದೆ. ಇದರಿಂದಾಗಿ ಇಂದು ದೇಶದಲ್ಲಿ ಬಂಡವಾಳ ಹೂಡಲು ಬರುವವರು ಹಿಂಜರಿಯುವ ಪರಿಸ್ಥಿತಿ ಬಂದಿದೆ ಎಂದರು.

ಧಾರ್ಮಿಕ ಸಂಘಟನೆಗಳಿಂದ ಉಂಟಾಗಿರುವ ಅಸಹಿಷ್ಣುತೆ ವಾತಾವರಣದಿಂದ ಭಾರತಕ್ಕೆ ಕೆಟ್ಟ ಹೆಸರು ಬಂದಿದೆ. ಹಾಗಾಗಿ ಇಂದು ತಮ್ಮನ್ನು ಭೇಟಿ ಮಾಡಿದ ಜರ್ಮನ್ ನಿಯೋಗ ಬಂಡವಾಳ ಹೂಡಲು ಆತಂಕ ವ್ಯಕ್ತಪಡಿಸಿದೆ. ಆದರೆ ನಾನು ಅವರನ್ನು ಸಮಾಧಾನಪಡಿಸಿದೆ ಎಂದು ವಿವರಿಸಿದರು. ಭೇಟಿ ನೀಡಿರುವ ಜರ್ಮನ್ ನಿಯೋಗ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಯಾವ ರೀತಿಯ ವಾತಾವರಣವಿದೆ. ಕಾನೂನಿನ ಕಟ್ಟಲೆಗಳೇನು, ರಾಜಕೀಯ ಸಹಕಾರ ಇನ್ನಿತರ ವಿಚಾರಗಳ ಬಗ್ಗೆ ನಮ್ಮೊಂದಿಗೆ ಚರ್ಚಿಸಿದೆ. ಅವರಿಗೆ ಸೂಕ್ತ ಮಾಹಿತಿ  ನೀಡಿದ್ದೇನೆ ಎಂದರು. ಧಾರ್ಮಿಕ ಅಸಹಿಷ್ಣುತೆ ನಿಯಂತ್ರಿಸಲು ನಮ್ಮಲ್ಲಿ ಕಾನೂನು ಬಲವಾಗಿದೆ. ಇದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸುವ ಅಗತ್ಯವಿಲ್ಲ. ಇರುವ ಕಾನೂನನ್ನೇ ಬಳಸಿಕೊಳ್ಳುತ್ತೇವೆ. ಒಂದು ವೇಳೆ ಕಾನೂನಿನ ಅಗತ್ಯವಿದ್ದರೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ನಮ್ಮಲ್ಲಿನ ಒಳ ಜಗಳಗಳ ಬಗ್ಗೆ ನಾನೇನು ಹೇಳಲಿಲ್ಲ. ಅಲ್ಲಲ್ಲಿ ಈ ತರಹ ನಡೆದಿದೆ ಆದರೆ ಆತಂಕ ಬೇಡ ಎಂದು ನಿಯೋಗಕ್ಕೆ  ಹೇಳಿದ್ದೇನೆ ಎಂದು ತಿಳಿಸಿದರು. ಕಲಬುರ್ಗಿ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇವರ ಹತ್ಯೆಯ ತನಿಖೆ ನಡೆ ಯುತ್ತಿದ್ದು ಇದರಲ್ಲಿ ಯಾರು ಭಾಗಿಯಾಗಿದ್ದಾರೆ. ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಎಂಬೆಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅದನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ ಎಂದರು. ಪೊಲೀಸ್ ಇಲಾಖೆಯಲ್ಲಿ ಶೇ.20 ರಷ್ಟು ಖಾಲಿ ಹುದ್ದೆಗಳಿವೆ. ಈ ಸಂಬಂಧ ಈಗಾಗಲೇ 8 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿವೆ. ಇನ್ನೂ 8 ಸಾವಿರ ಹುದ್ದೆಗಳ ನೇಮಕಾತಿಗೆ ಅನುಮತಿ ಪಡೆದು ಮುಂದಿನ ವರ್ಷದೊಳಗೆ ನೇಮಕಾತಿ ಮಾಡಲಾಗುವುದು ಎಂದು ಹೇಳಿದ ಅವರು, ಪ್ರತಿ ವರ್ಷ 3 ರಿಂದ 4 ಸಾವಿರ  ಹುದ್ದೆಗಳು ಖಾಲಿಯಾಗುತ್ತವೆ, ಅವುಗಳಿಗೆ ಕಾಲ-ಕಾಲಕ್ಕೆ ನೇಮಕಾತಿ ಮಾಡುವ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದರು.

ಅನಗತ್ಯವಾಗಿ ಗಣ್ಯರ ಬದ್ಧತೆ ಹಾಗೂ ಹಿರಿಯ ರಾಜಕಾರಣಿಗಳ ಮನೆಗಳಗೆ ನಿಯೋಜಿಸಲಾಗಿರುವ ತರಬೇತಿ ಪಡೆದ   ಪೊಲೀಸರನ್ನು ವಾಪಾಸು ಕರೆಸಿಕೊಳ್ಳಲು ಚಿಂತನೆ ನಡೆದಿದೆ. ತಾವು ಗೃಹ ಇಲಾಖೆಯ ಪೂರ್ಣ ಕಾರ್ಯಭಾರ ವಹಿಸಿಕೊಂಡ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ. ಸದ್ಯಕ್ಕೆ ವಿಧಾನಸೌಧದ ಕಚೇರಿಯ ನವೀಕರಣ ಕಾರ್ಯ ನಡೆಯುತ್ತಿದ್ದು, ಅಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು   ಹೇಳಿದರು. ಜರ್ಮನಿ ದೇಶದ ಸಚಿವ ತರೀಕ್ ವಜೀರ್, ಕೌನ್ಸಿಲ್ ಜನರಲ್ ಜಾರ್ನ್ ರೋಮ್‌ರಿ ನೇತೃತ್ವದ ವಿಶೇಷ  ನಿಯೋಗ   ಪರಮೇಶ್ವರ್ ಅವರನ್ನು ಭೇಟಿ ಮಾಡಿತ್ತು.

Write A Comment