ನವದೆಹಲಿ: ಸ್ಪೀಕರ್ ಆಗಿ ಕಾಗೋಡು ತಿಮ್ಮಪ್ಪ ಅವರನ್ನು ಮುಂದುವರೆಸುವಂತೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಸೂಚಿಸಿದೆ.
ಸಚಿವ ಸಂಪುಟ ವಿಸ್ತರಣೆಗೆ ಮಾತ್ರ ಅನುಮತಿ ನೀಡಿರುವ ಹೈಕಮಾಂಡ್, ಕಾಗೋಡು ತಿಮ್ಮಪ್ಪ ಅವರನ್ನು ಸ್ಪೀಕರ್ ಹುದ್ದೆಯಲ್ಲೇ ಮುಂದುವರೆಸಿ, ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವಂತೆ ಸಿಎಂಗೆ ಸೂಚಿಸಿದೆ. ಇದರಿಂದಾಗಿ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಕೆಲವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪದೇಪದೇ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸುವ ಮೂಲಕ ಸರ್ಕಾರಕ್ಕೆ ಇರುಸು ಮುರುಸು ಉಂಟು ಮಾಡುತ್ತಿದ್ದ ಕಾಗೋಡು ತಿಮ್ಮಪ್ಪ ಅವರನ್ನು ಸಚಿವ ಸಂಪುಟ್ಟಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು ಎಂಬ ವದಂತಿಗಳು ದಟ್ಟವಾಗಿ ಹಬ್ಬಿದ್ದವು. ಅಲ್ಲದೆ ಸ್ಪೀಕರ್ ಸ್ಥಾನಕ್ಕೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರನ್ನು ಕೂರಿಸುತ್ತಾರೆ ಎಂಬ ವರದಿಗಳು ಕೇಳಿ ಬಂದಿದ್ದವು. ಆದರೆ ಜಯಚಂದ್ರ ಅವರು ಸಚಿವ ಸ್ಥಾನಕ್ಕೆ ಅಂಟಿಕೊಂಡಿದ್ದರಿಂದ ಕಾಗೋಡು ಅವರನ್ನೇ ಮುಂದುವರೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನವೆಂಬರ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಶಾಸಕರಾದ ಎಚ್.ವೈ.ಮೇಟಿ, ವಿನಯ್ ಕುಲಕರ್ಣಿ ಹಾಗೂ ಎ.ಮಂಜು ಅವರು ಸಚಿವರಾಗುವ ಸಾಧ್ಯತೆ ಇದೆ.
