ಮಂಗಳೂರು: ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ತುಂಬು ಗರ್ಭಿಣಿಯೊಬ್ಬರು ಮೃತಪಟ್ಟಿದ್ದು, ಮಹಿಳೆ ಅಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಹಾಗೂ ಇದೊಂದು ಸಂಶಯಾಸ್ಪದ ಸಾವು. ಜಿಲ್ಲಾ ಆರೋಗ್ಯಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿ ಮೃತ ಮಹಿಳೆಯ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ವಿಟ್ಲ ಪಡ್ನೂರು ಗ್ರಾಮದ ಪೂಲರಪ್ಪಾಡಿ ನಿವಾಸಿ ರಮೇಶ್ ಎಂಬುವರ ಪತ್ನಿ ಗಿರಿಜಾ (28) ಎಂದು ಹೆಸರಿಸಲಾಗಿದೆ.
ಗಿರಿಜಾ ಹೆರಿಗೆಗೆಂದು ತಮ್ಮ ಮನೆಯವರ ಜತೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ದಾಖಲಾಗಿದ್ದರು. ಈ ವೇಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದರು.
108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ತೆರಳಲು ಮಹಿಳೆಯನ್ನು ಆಂಬ್ಯುಲೆನ್ಸ್ನಲ್ಲಿ ಮಲಗಿಸಿದ್ದರು. 108 ಸಿಬ್ಬಂದಿಗಳು ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾದಾಗ ಅದಾಗಲೇ ಅವರು ಮೃತಪಟ್ಟಿರುವುದು ತಿಳಿದಿದೆ. ಈ ವಿಷಯವನ್ನು ಆಂಬ್ಯುಲೆನ್ಸ್ ಸಿಬ್ಬಂದಿ ಮಹಿಳೆಯ ಸಂಬಂಧಿಕರಿಗೆ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಹಿಳೆಯ ಸಂಬಂಧಿಕರು ಹಾಗೂ ಊರಿನ ಮುಖಂಡರು ಸ್ಥಳಕ್ಕೆ ಆಗಮಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಗಿರಿಜಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರೂ ಈ ವಿಚಾರವನ್ನು ಸಿಬ್ಬಂದಿ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ವಿಷಯ ತಿಳಿಯುತ್ತಿದ್ದಂತೆ ವಿಟ್ಲ ಠಾಣೆಯ ಎಸ್ಐ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ವರ್ಗ ಸಾರ್ವಜನಿಕರ ಮನವೊಲಿಸಿದರೂ ಪ್ರಯೋಜನವಾಗಿಲ್ಲ.
ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ವೇದಾವತಿ ಅವರನ್ನು ಪೊಲೀಸರು ಸಾರ್ವಜನಿಕರ ಮುಂದೆ ಬರುವಂತೆ ವಿನಂತಿಸಿದ ಬಳಿಕ ಅವರು ಹೊರಬಂದರು.
ಈ ವೇಳೆ ಮಾತನಾಡಿ “ನಮ್ಮ ಪ್ರಯತ್ನ ಮಾಡಿದ್ದೇವೆ. ಕೊನೆಗಳಿಗೆಯಲ್ಲಿ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ತಿಳಿಸಿದ್ದೆವು. ನಮ್ಮ ನಿರ್ಲಕ್ಷ್ಯದಿಂದ ಅವರು ಮೃತಪಟ್ಟಿಲ್ಲ”ವೆಂದು ಸ್ಪಷ್ಟೀಕರಣ ನೀಡಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಕೊಂಡೊಯ್ಯುವುದಿಲ್ಲ ಹಾಗೂ ಶವ ಮಹಜರು ನಡೆಸಲು ಬಿಡುವುದಿಲ್ಲವೆಂದು ಸಂಬಂಧಿಕರು ಪಟ್ಟುಹಿಡಿದಿದ್ದರು.


