ಕರ್ನಾಟಕ

ಬೆಳಗಾವಿಯಲ್ಲಿ ರೌಡಿಗಳ ಅಟ್ಟಹಾಸ: 10 ಮನೆಗಳ ಬಾಗಿಲು ಮುರಿದ ದುಷ್ಕರ್ಮಿಗಳು

Pinterest LinkedIn Tumblr

roಬೆಳಗಾವಿ: ಕಳೆದ ಶುಕ್ರವಾರವಷ್ಟೇ ರಣರಂಗವಾಗಿದ್ದ ನಗರದ ಗ್ಯಾಂಗ್‌ವಾಡಿಯಲ್ಲಿ ಇಂದೂ ಕೂಡ ಕೆಲ ದುಷ್ಕರ್ಮಿಗಳು 10ಕ್ಕೂ ಹೆಚ್ಚು ಮನೆಗಳ ಬಾಗಿಲು ಮುರಿಯುವ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ.

ಹೌದು, 15ಕ್ಕೂ ಹೆಚ್ಚು ಮಂದಿ ಇದ್ದ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿದ್ದು, ಗ್ಯಾಂಗ್ವಾಡಿಯಲ್ಲಿ ವಾಸಿಸುತ್ತಿರುವ 10 ಕ್ಕೂ ಹೆಚ್ಚು ಮನೆಗಳ ಬಾಗಿಲು ಮುರಿದ್ದಾರೆ. ಅಷ್ಟೇ ಅಲ್ಲದೆ ಮನೆಯೊಳಗಿದ್ದವರನ್ನು ಮನಬಂದಂತೆ ಥಳಿಸಿ ಮನೆಯೊಳಗಿನ ಹಲವು ಪೀಠೋಪಕರಣಗಳನ್ನು ನಾಶಗೊಳಿಸಿದ್ದಾರೆ. ಜೊತೆಗೆ ಮನೆಯ ಹೊರ ಭಾಗದಲ್ಲಿ ನಿಲ್ಲಿಸಲಾಗಿದ್ದ 10ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ರವಿ ಅವರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಗುಂಪು ಚದುರಿಸುವ ಕಾರ್ಯಕ್ಕಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಸಂಬಂಧ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 10ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಯು ಇಂದು ಮಧ್ಯಾಹ್ನ 12.30ರ ವೇಳೆಯಲ್ಲಿ ನಡೆದಿದ್ದು, ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕೃತ್ಯವನ್ನು ರಾಜಕಾರಿಣಿ ಶಿವಾನಂದ್ ಚೌಗ್ಲೇ ಬೆಂಬಲಿಗರು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

Write A Comment