ಬೆಂಗಳೂರು: ಎಸ್‌ಐ ಜಗದೀಶ್ ಅವರಿಗೆ ಚಾಕುವಿನಿಂದ ಇರಿದ ಆರೋಪಿ ಹರೀಶ್ ಬಾಬುನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಆತನಿಗಿರುವ ಏಡ್ಸ್ ಕಾಯಿಲೆ ಪೊಲೀಸರಿಗೆ ಅಡ್ಡಿಯಾಗಿದೆ.
‘ಹರೀಶ್ ಬಾಬುಗೆ ಏಡ್ಸ್ ಇರುವುದನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ. ಅದನ್ನೇ ವರದಾನ ಮಾಡಿಕೊಂಡು ಆತ, ಸಾಕಷ್ಟು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಪೊಲೀಸರಿಗೆ ಸಿಕ್ಕಿ ಬಿದ್ದಾಗ ತನಗೆ ಏಡ್ಸ್ ಇದೆ ಎಂದು ವೈದ್ಯಕೀಯ ದಾಖಲೆ ತೋರಿಸಿ ಹೆಚ್ಚಿನ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಾನೆ’ ಎಂದು ಕೇಂದ್ರ ವಿಭಾಗದ ಐಜಿಪಿ ಅರುಣ್ ಚಕ್ರವರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಸಮಸ್ಯೆಯು ಎಸ್‌ಐ ಹತ್ಯೆ ಪ್ರಕರಣದ ತನಿಖೆಗೂ ಅಡ್ಡಿಯಾಗಿದೆ. ಮಧುನನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲು ಮಾಡಿಕೊಂಡಿರುವ ಪೊಲೀಸರಿಗೆ, ಹರೀಶ್ ಬಾಬುನಿಂದ ಮಾಹಿತಿ ಸಂಗ್ರಹಿಸುವುದು ಕಷ್ಟವಾಗಿದೆ.
‘ಇದೇ ಮೇ ತಿಂಗಳಲ್ಲಿ ಹರೀಶ್ ಬಾಬುನನ್ನು ಬಂಧಿಸಿ, 2 ಕೆ.ಜಿ ಬೆಳ್ಳಿ ಹಾಗೂ 150 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದೆವು. ಆಗ ಆತ ಏಡ್ಸ್ ಇರುವುದಾಗಿ ವೈದ್ಯಕೀಯ ದಾಖಲೆ ಕೊಟ್ಟಿದ್ದ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಮೌಖಿಕ ಹೇಳಿಕೆಯನ್ನಷ್ಟೇ ದಾಖಲಿಸಿಕೊಂಡು ಜೈಲಿಗೆ ಕಳುಹಿಸಬೇಕಾಯಿತು. 10 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆತನನ್ನು, ಮಧುವಿನ ತಾಯಿ ತಿಮ್ಮಕ್ಕ ಜಾಮೀನು ಕೊಡಿಸಿ ಕೊರೆದುಕೊಂಡು ಹೋಗಿದ್ದಳು’ ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದ್ದಾರೆ.
ಮಂತ್ರಾಲಯಕ್ಕೂ ಹೋಗಿದ್ದರು: ‘ಎಸ್‌ಐಯನ್ನು ಹತ್ಯೆಗೈದ ನಂತರ ಮಧು ಮತ್ತು ಹರೀಶ್ ಬಾಬು, ತಿಮ್ಮಕ್ಕಳ ಬಳಿ 12 ಗ್ರಾಂನ ಚಿನ್ನದ ಸರವನ್ನು ಪಡೆದುಕೊಂಡಿದ್ದರು. ನಂತರ ಕರ್ನೂಲಿಗೆ ತೆರಳಿದ್ದ ಅವರು, ಚಿನ್ನಾಭರಣ ವ್ಯಾಪಾರಿ ಹನುಮಂತರಾಮುನನ್ನು ಭೇಟಿಯಾಗಿದ್ದರು. ಆ ಸರವನ್ನು ಆತನಿಗೆ ಕೊಟ್ಟು ₹ 5 ಸಾವಿರ ಪಡೆದುಕೊಂಡು ಮಂತ್ರಾಲಯಕ್ಕೆ ಹೋಗಿ ಬಂದಿದ್ದರು’ ಎಂದು ಅರುಣ್ ಚಕ್ರವರ್ತಿ ಮಾಹಿತಿ ನೀಡಿದರು.
ಚಿತ್ರೀಕರಣ: ತನಿಖಾಧಿಕಾರಿಗಳು ಶನಿವಾರವೂ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು, ಅಂದಿನ ಘಟನೆಯನ್ನು ಮರುಸೃಷ್ಟಿಸಿ ವಿಡಿಯೊ ಚಿತ್ರೀಕರಣ ಮಾಡಿಕೊಂಡರು. ಹಂತಕರು ಶೋರೂಂಗೆ ಬರುವುದು, ವಾಹನ ನಿಲುಗಡೆ ಪ್ರದೇಶದಲ್ಲಿ ಸ್ಕೂಟರ್‌ಗಳನ್ನು ನಿಲ್ಲಿಸುವುದು, ಪೊಲೀಸರನ್ನು ಕಂಡು ಓಡುವುದು, ನಂತರ ಎಸ್‌ಐಗೆ ಹರೀಶ್ ಬಾಬು ಇರಿಯುವುದು… ಹೀಗೆ ಅಂದಿನ ಇಡೀ ಘಟನೆಯನ್ನು ಮತ್ತೆ ಸೃಷ್ಟಿಸಿದರು. ಈಗ ಆರೋಪಿಗಳನ್ನು ಕರ್ನೂಲು, ಮಂತ್ರಾಲಯಕ್ಕೆ ಕರೆದೊಯ್ದು ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖಾ ತಂಡ ನಿರ್ಧರಿಸಿದೆ.
ರಿವಾಲ್ವರ್‌ನಲ್ಲಿ ಐದು ಗುಂಡು
‘ಎಸ್‌ಐ ಅವರಿಂದ ಹಂತಕರು ಕದ್ದೊಯ್ದಿದ್ದ ರಿವಾಲ್ವರ್‌ನಲ್ಲಿ ಐದು ಗುಂಡುಗಳು ಪತ್ತೆಯಾಗಿವೆ. ಪೊಲೀಸರು ಗುರುವಾರ (ಅ.22) ಕರ್ನೂಲಿನಲ್ಲಿ ಆ ರಿವಾಲ್ವರನ್ನು ಪತ್ತೆ ಮಾಡಿದ್ದರು. ಅದನ್ನು ನಿರ್ವಹಣೆ ಮಾಡುವ ವಿಧಾನ ಆರೋಪಿಗಳಿಗೆ ಗೊತ್ತಿಲ್ಲ. ಹೀಗಾಗಿ ಗುಂಡುಗಳನ್ನು ತೆಗೆಯುವ ಗೋಜಿಗೆ ಅವರು ಹೋಗಿಲ್ಲ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
