ಅರಸೀಕೆರೆ, ಅ.11-ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ಮೂರು ವರ್ಷದ ಪ್ರಾಯದ ಹೆಣ್ಣು ಚಿರತೆಯೊಂದನ್ನು ಬಲೆ ಮೂಲಕ ಸೆರೆ ಹಿಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೈಸೂರಿನ ಮೃಗಾಲಯಕ್ಕೆ ಕಳುಹಿಸಿಕೊಟ್ಟರು. ತಾಲೂಕಿನ ಅಗ್ಗುಂದ ಗ್ರಾಮದ ಶಿವಣ್ಣ ಎಂಬುವವರ ತೋಟದಲ್ಲಿ ಈ ಚಿರತೆ ಕಾಣಿಸಿಕೊಂಡಿದ್ದು , ಭಯಭೀತರಾದ ಶಿವಣ್ಣ ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.
ಕೂಡಲೇ ಕಾರ್ಯ ಪ್ರವೃತ್ತರಾದ ವಲಯ ಅರಣ್ಯ ಇಲಾಖೆಯ ಅಧಿಕಾರಿ ಸಯ್ಯದ್ ಹುಸೈನಿ ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆಯನ್ನು ಬಲೆಯ ಮೂಲಕ ಸೆರೆ ಹಿಡಿಯಲು ಯಶಸ್ವಿಯಾದರು.
ಸೆರೆ ಸಿಕ್ಕ ಚಿರತೆಗೆ ಪಶು ಇಲಾಖೆಯ ವೈದ್ಯ ಮಂಜುನಾಥ್ ಪ್ರಾಥಮಿಕ ಚಿಕಿತ್ಸೆಯಲ್ಲಿ ಚಿರತೆಗೆ ಆಹಾರ ಸಿಗದ ಕಾರಣ ಅಸ್ವಸ್ಥಗೊಂಡಿದ್ದು , ಈಗ ಚಿರತೆಗೆ ಚುಚ್ಚುಮದ್ದು ನೀಡಿದ್ದು ಚಿರತೆ ಚೇತರಿಸಿಕೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಈ ಸಂಬಂಧ ವಲಯ ಅರಣ್ಯಾಧಿಕಾರಿ ಸಯ್ಯದ್ ಹುಸೈನಿ ಮಾತನಾಡಿ, ಚಿರತೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮೈಸೂರು ಮೃಗಾಲಯಕ್ಕೆ ಕಳುಹಿಸಿ ಕೊಡಲಾಗುವುದೆಂದು ತಿಳಿಸಿದರು. ಆತಂಕ: ಗ್ರಾಮೀಣ ಭಾಗದಲ್ಲಿ ಚಿರತೆ ಹಾಗೂ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು ಗ್ರಾಮೀಣ ಭಾಗದ ಜನತೆಯ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡು ಬೆನ್ನಲ್ಲೇ ಕಸಬಾ ಹೋಬಳಿ ನಾಗಪುರಿ ಅರಣ್ಯಕ್ಕೆ ಹೊಂದಿಕೊಂಡಂತಿರುವ ಅಗ್ಗುಂದ ಗ್ರಾಮದಲ್ಲಿ ಚಿರತೆ ಪತ್ತೆಯಾಗಿರುವುದು ಈ ಭಾಗದ ಜನತೆಯ ಆತಂಕ ಮತ್ತಷ್ಟು ಹೆಚ್ಚುವಂತಾಗಿದೆ.