ಬೆಂಗಳೂರು,ಅ.11-ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿ ಮೃತ ರೈತರ ಮನೆಗಳಿಗೆ ಭೇಟಿ ನೀಡಿರುವುದು ರಾಜಕೀಯ ಲಾಭಕ್ಕಾಗೇ ವಿನಃ ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಂದಿಲ್ಲಿ ಹೇಳಿದರು.
ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಆಯೋಜಿಸಿದ್ದ ಜಾನಪದ ಉತ್ಸವದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಭೇಟಿಯಿಂದ ರೈತರ ಸಂಕಷ್ಟ ನಿವಾರಣೆಯಾಗಿಲ್ಲ. ರೈತರ ಮೊಗದಲ್ಲಿ ನಗು ಬಂದಿಲ್ಲ. ಸಂಕಷ್ಟ ಹಾಗೇ ಮುಂದುವರೆದಿದೆ ಎಂದರು.
ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು, ಅವರ ಹಳೆಯ ಸಾಲ ಮನ್ನಾ ಮಾಡಿ ಹೊಸ ಸಾಲದ ಪ್ಯಾಕೇಜ್ ನೀಡಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಸಂಘ ಹೋರಾಟ ನಡೆಸುವುದು ಎಂದರು.
ಬಿಡಿಎ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದ್ದು, ಈ ಸಂಬಂಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.