ಕರ್ನಾಟಕ

ಮಾಲೀಕರ ಮನೆ ದೋಚಿದ ಕೆಲಸದಾಕೆ: ಮನೆ ಯಜಮಾನನಿಗೆ ಕಾಫಿಯಲ್ಲಿ ನಿದ್ರೆ ಮಾತ್ರೆ ನೀಡಿ ಕೃತ್ಯವೆಸಗಿದ ಕಳ್ಳಿ

Pinterest LinkedIn Tumblr

coffee-sleeping-tabletಬೆಂಗಳೂರು: ಮನೆ ಮಾಲೀಕರಿಗೆ ನಿದ್ರೆ ಮಾತ್ರೆ ಬೆರೆಸಿದ ಕಾಫಿ ಕುಡಿಸಿದ ಮನೆಕೆಲಸದ ಮಹಿಳೆ 300 ಗ್ರಾಂ ಚಿನ್ನಾಭರಣ ಹಾಗೂ ರು.30 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಸುಬ್ರಮಣ್ಯ ನಗರದ ಗಾಯತ್ರಿ ನಗರದಲ್ಲಿ ನಡೆದಿದೆ.

ಬಿಲ್ಡಿಂಗ್ ಗುತ್ತಿಗೆದಾರ ಕಾಂತಿ, ಪತ್ನಿ ಜಯಲಲಿತಾ, ತಂದೆ ಪದ್ಮಜಯರಾಜು ಮತ್ತು ಅವರ ಪುತ್ರ ರಾಹುಲ್‍ಗೆ ಬುಧವಾರ ನಿದ್ರೆ ಮಾತ್ರೆ ಬೆರಸಿದ ಕಾಫಿ ನೀಡಿದ ಜನನಿ ಎಂಬಾಕೆ, ಅವರು ಪ್ರಜ್ಞೆ ತಪ್ಪಿದ ಬಳಿಕ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾಳೆ. ಕಾಂತಿ ಸ್ನೇಹಿತರೊಬ್ಬರು ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಒಳಗೆ ಪ್ರವೇಶಿಸಿದಾಗ ಕುಟುಂಬದ ವರೆಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗೆ ದಾಖಲಿಸಿದಾಗ ನಿದ್ರೆ ಮಾತ್ರೆ ಸೇವಿಸಿರುವುದು ಗೊತ್ತಾಗಿದೆ.

ವಾಪಸ್ ಮನೆಗೆ ಬಂದಾಗ ಚಿನ್ನಾಭರಣಗಳು ಕಾಣೆಯಾಗಿದ್ದವು. ಆಗಲೇ, ಇದು ಮನೆಕೆಲಸದಾಕೆಯ ಕೃತ್ಯ ಎನ್ನುವುದು ಗೊತ್ತಾಗಿದೆ. ಮನೆಕೆಲಸದ ಮಹಿಳೆಯ ಬಗ್ಗೆ ವಿಳಾಸ, ಆಕೆಯ ಊರಿನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಫೋಟೋ ಮಾತ್ರ ಇದೆ. ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯನಗರ ಪೊಲೀಸರು ಹೇಳಿದ್ದಾರೆ.

ಗರ್ಭಿಣಿ ಆತ್ಮಹತ್ಯೆ

ಜೆ.ಪಿ.ನಗರ ಸಮೀಪದ ಮುನಿಸ್ವಾಮಪ್ಪ ಲೇಔಟ್‍ನಲ್ಲಿ ಬುಧವಾರ ರಾತ್ರಿ ಎರಡು ತಿಂಗಳ ಗರ್ಭಿಣಿ ದಾಕ್ಷಾಯಿಣಿ (22) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ಕಿರುಕುಳ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಸುರೇಶ್ ನನ್ನು ಬಂಧಿಸಿದ್ದಾರೆ.

ಕೊಳ್ಳೇಗಾಲದ ದಾಕ್ಷಾಯಿಣಿ ಹಾಗೂ ಸುರೇಶ್ ನಡುವೆ ಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಎರಡು ವರ್ಷದ ಮಗಳಿದ್ದು, ದ್ರಾಕ್ಷಾಯಿಣಿ ಗರ್ಭಿಣಿ ಆಗಿದ್ದರು. ಸಂಜೆ ಆರು ಗಂಟೆ ಸುಮಾರಿಗೆ ಕೌಟುಂಬಿಕ ವಿಚಾರವಾಗಿ ಗಲಾಟೆ ಆಗಿತ್ತು. ಈಗ ಕೋಪಗೊಂಡ ಪತ್ನಿ ಕೊಠಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೆಲ ಹೊತ್ತಿನ ಬಳಿಕ ಬಾಗಿಲು ಮುರಿದು ನೋಡಿದಾಗ ಪತ್ನಿ ಸೀರೆಯಿಂದ ನೇಣು ಹಾಕಿಕೊಂಡಿದ್ದಳು ಎಂದು ಸುರೇಶ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಚಾರವನ್ನು ಮೃತಳ ಪಾಲಕರಿಗೆ ತಿಳಿಸದೆ ರಾತ್ರಿ 12 ಗಂಟೆ ಸುಮಾರಿಗೆ ಗೌಪ್ಯವಾಗಿ ಅಂತ್ಯಕ್ರಿಯೆ ಮುಗಿಸಲು ಮುಂದಾಗಿದ್ದ. ಈ ಬಗ್ಗೆ ಸ್ಥಳೀಯರೊಬ್ಬರು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆಯಲಾಯಿತು.

Write A Comment