ನವದೆಹಲಿ: ಭ್ರಷ್ಟಾಚಾರಕ್ಕೆ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ತಮ್ಮ ಸಂಪುಟ ಸಚಿವರನ್ನೇ ಶುಕ್ರವಾರ ವಜಾಗೊಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಆಸಿಮ್ ಅಹಮ್ಮದ್ ಖಾನ್ ವಿರುದ್ಧ ಬಿಲ್ಡರ್ ಒಬ್ಬರಿಂದ 6 ಲಕ್ಷ ರುಪಾಯಿ ಲಂಚ ಸ್ವೀಕರಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಸಿಮ್ ಖಾನ್ ಲಂಚ ಸ್ವೀಕರಿಸಿದ ಸಾರ್ವಜನಿಕರಿಂದ ನಮಗೆ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ವಜಾಗೊಳಿಸಲು ನಿರ್ಧರಿಸಲಾಯಿತು ಎಂದು ದೆಹಲಿ ಸಿಎಂ ತಿಳಿಸಿದ್ದಾರೆ.
ಈ ಪ್ರಕರಣವನ್ನು ಸಿಬಿಐ ಶಿಫಾರಸು ಮಾಡಿರುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ತಾಕತ್ತಿದ್ದರೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿನ ಕಳಂಕಿತ ಸಚಿವರನ್ನು ಕೈಬಿಡುವಂತೆ ಸವಾಲು ಹಾಕಿದರು.