ಬೆಂಗಳೂರು, ಅ. 7: ಮುಸ್ಲಿಮ್ ಸಮುದಾಯದ ವಿರುದ್ಧ ಸಮಾಜದ ಇತರ ಸಮುದಾಯಗಳನ್ನು ಎತ್ತಿಕಟ್ಟುವ ಹುನ್ನಾರ ಗೋಮಾಂಸ ಸೇವನೆ ವಿಚಾರದಲ್ಲಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ತಿಳಿಸಿದರು.
‘ಗೋಮಾಂಸ ತಿನ್ನುತ್ತೇವೆ ಬನ್ನಿ, ನಮ್ಮನ್ನು ಕೊಂದು ಹಾಕಿ’ ಎಂಬ ಘೋಷಣೆಯಡಿ ಸಮಾನ ಮನಸ್ಕರ ವೇದಿಕೆ ನಗರದ ಟೌನ್‌ಹಾಲ್ ಎದುರು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಗೋ ಮಾಂಸವನ್ನು ಮುಸ್ಲಿಮರು ಮಾತ್ರ ತಿನ್ನುವುದು ಎಂದು ಬಿಂಬಿಸುವ ಮೂಲಕ ಅವರ ವಿರುದ್ಧ ಇತರೆ ಧರ್ಮಗಳನ್ನು ಎತ್ತಿಕಟ್ಟಿ ಕೋಮು ಗಲಭೆಗಳನ್ನು ಸೃಷ್ಟಿಸಲು ಮೂಲಭೂತವಾದಿಗಳು ಸಂಚು ರೂಪಿಸಿದ್ದಾರೆ ಎಂದು ದೂರಿದರು.
ದೇಶದಲ್ಲಿ ಗೋವಿನ ಬಗ್ಗೆ ಮಾತನಾಡುವ ಅಧಿಕಾರವಿರುವುದು ರೈತರಿಗೆ ಮಾತ್ರ. ಕಾರಣ ಅವರು ಗೋವುಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ. ಆದರೆ, ಒಂದು ದಿನವೂ ಗೋವಿನ ಆರೈಕೆ ಮಾಡದ, ಗೋವಿನ ಗಂಜಲ-ಸಗಣಿಯನ್ನು ಎತ್ತದವರು ಇಂದು ಗೋ ಸಂರಕ್ಷಣೆಯ ಕುರಿತು ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ಮಟ್ಟು ಹೇಳಿದರು.
ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎನ್ನುವ ಹಿಂದೂ ಪರಿಷತ್‌ಗಳು ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಯಿಲ್ಲ ಎನ್ನುವಂತಾದರೆ, ದೇವಾಲಯ ಪ್ರವೇಶ ವಿಚಾರದಲ್ಲಿ ದಲಿತರನ್ನು ಕೊಂದಿರುವುದರ ವಿರುದ್ಧ ಏಕೆ ಹೋರಾಟ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ನಾವೆಲ್ಲ ಎಲ್ಲೆಲ್ಲಿ ಅಸ್ಪಶ್ಯತೆ ಹಾಗೂ ಜಾತಿ ತಾರತಮ್ಯ ಆಚರಣೆಯಲ್ಲಿದೆ ಅಂತಹ ಧಾರ್ಮಿಕ ಕೇಂದ್ರಗಳನ್ನು ಬಹಿಷ್ಕರಿಸಬೇಕು. ಇಲ್ಲವಾದಲ್ಲಿ ಇಂತಹ ಹತ್ಯೆಗಳು ನಡೆಯುತ್ತಲೇ ಇರುತ್ತವೆ ಎಂದು ಅವರು ಎಚ್ಚರಿಕೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಗೋ ಮಾಂಸವನ್ನು ವಿರೋಧಿಸುವವರು ಗುಟ್ಟಾಗಿ ಗೋ ಮಾಂಸವನ್ನು ತಿನ್ನುತ್ತಿರುವುದರಿಂದ ಗೋ ಮಾಂಸದ ಬೆಲೆ ಏರಿಕೆಯಾಗಿದೆ ಎಂಬ ಅನುಮಾನ ನನ್ನಲ್ಲಿದೆ ಎಂದು ಅಮೀನ್ ಮಟ್ಟು ವ್ಯಂಗ್ಯವಾಡಿದರು.
ಗೋಮಾಂಸ ನಿಷೇಧದ ಕುರಿತು ಮಾತ ನಾಡುವವರು ಎಲ್ಲಿಯೂ ವೇದ-ಉಪನಿಷತ್‌ಗಳನ್ನ್ನು ಉಲ್ಲೇಖ ಮಾಡುವುದಿಲ್ಲ. ಕಾರಣ ಇಂದು ಗೋಮಾಂಸವನ್ನು ನಿಷೇಧ ಮಾಡಬೇಕೆಂದು ಹೇಳುವವರ ಹಿರಿಯರು ಗೋಮಾಂಸವನ್ನು ತಿಂದು ಚಪ್ಪರಿಸಿದವರೇ ಆಗಿದ್ದಾರೆ ಎಂದು ಅಮೀನ್‌ಮಟ್ಟು ವ್ಯಂಗ್ಯವಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿಂದು ಹುಚ್ಚುನಾಯಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳ ಕೆಲಸ ಕೇವಲ ಬೊಗಳುವುದು ಮಾತ್ರ. ಅವುಗಳ ಬೊಗಳುವಿಕೆಗೆ ಪ್ರತಿಹೇಳಿಕೆಗಳನ್ನು ನೀಡಿ ಅವುಗಳ ಬಾಯಿ ಮುಚ್ಚಿಸಬೇಕು ಎಂದು ಅವರು ಹೇಳಿದರು.
ಸಮಾಜ ಪರಿವರ್ತನಾ ಜನಾಂದೋಲನದ ಅಧ್ಯಕ್ಷ ವೈ.ಮರಿಸ್ವಾಮಿ ಮಾತನಾಡಿ, ಇಂದು ಎಲ್ಲ ಕ್ರೀಡಾ ಪಟುಗಳು ಹೆಚ್ಚಿನ ಶಕ್ತಿ ಪಡೆಯಲು ಗೋಮಾಂಸವನ್ನು ತಿನ್ನುತ್ತಾರೆ. ಭಾರತೀಯ ಕ್ರಿಕೆಟಿಗ ರವಿಶಾಸ್ತ್ರಿ ಆರು ಬಾಲಿಗೆ ಆರು ಸಿಕ್ಸ್ ಹೊಡೆದಾಗ ‘ನನ್ನ ಸಾಧನೆಗೆ ಗೋಮಾಂಸವೇ ಕಾರಣ’ ಎಂದಿದ್ದರು ಎಂದು ಸ್ಮರಿಸಿದರು.
ಉತ್ತರ ಪ್ರದೇಶದ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ದೇಶದ ಕಾನೂನಿನ ಮೇಲೆ ಗೌರವವಿದ್ದರೆ, ಇನ್ನೊಮ್ಮೆ ದಾದ್ರಿಯಲ್ಲಿ ನಡೆದಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಟನಕಾರರು ಗೋ ಮಾಂಸವನ್ನು ತಿನ್ನುವ ಮೂಲಕ ಗೋಮಾಂಸ ನಿಷೇಧಿಸುವಂತೆ ಒತ್ತಾಯಿಸುವವರಿಗೆ ತಿರುಗೇಟು ನೀಡಿದರು.
ನಾವು ಏನು ತಿನ್ನಬೇಕು, ಏನು ಧರಿಸ ಬೇಕು, ಯಾವ ಹಾಡು ಕೇಳಬೇಕು, ಯಾವ ಸಿನೆಮಾ ನೋಡಬೇಕು, ಯಾರ ಬಳಿ ಮಾತನಾಡಬೇಕು, ಯಾರ ಬಳಿ ಮಾತನಾಡ ಬಾರದು ಎಂಬುದನ್ನು ಯಾರೋ ನಿರ್ದೇಶನ ಮಾಡುವ ಪರಿಸ್ಥಿತಿಯಲ್ಲಿಂದು ನಾವಿದ್ದೇವೆ. ನಾವು ಹೇಗಿರಬೇಕು ಎಂಬುದು ನಮ್ಮ ಆಯ್ಕೆ, ಇನ್ನೊಬ್ಬರು ಹೇಳುವ ಅವಶ್ಯಕತೆಯಿಲ್ಲ.
ಶೀಮಾ, ಸ್ವರಾಜ್ ಅಭಿಯಾನ.
ಗೋಮಾಂಸವನ್ನು ನಿಷೇಧ ಮಾಡಬೇಕು ಎನ್ನುವವರು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಮಹಾಭಾರತದ ಕುರಿತು ಬರೆದಿರುವ ‘ಪರ್ವ’ ಕಾದಂಬರಿಯನ್ನು ಓದಿ ಮೆದುಳು ಸರಿಮಾಡಿಕೊಳ್ಳಲಿ. ಪೇಜಾವರ ಶ್ರೀಗಳು ಹಿಂದೂ ಧರ್ಮದ ಕುರಿತು ಮಾತನಾಡುವ ಮೊದಲು ಒಬ್ಬ ಶೂದ್ರನನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿಕೊಳ್ಳಲಿ. ಆನಂತರ ಅವರು ಹಿಂದೂ ಧರ್ಮದ ಕುರಿತು ಮಾತನಾಡಲಿ.
ದಿನೇಶ್ ಅಮೀನ್ ಮಟ್ಟು, ಸಿಎಂ ಮಾಧ್ಯಮ ಸಲಹೆಗಾರ.