ಬೆಂಗಳೂರು, ಅ.5- ಮಹದಾಯಿ, ಮಲಪ್ರಭಾ ನದಿ ಜೋಡಣೆ, ಬರ, ರೈತರ ಬೆಳೆ ವಿಫಲ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕಳೆದ 80 ದಿನಗಳಿಂದ ನವಲಗುಂದ, ನರಗುಂದದಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸದೆ ದೊಂಬರಾಟ ಆಡುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಂತಹ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗದೆ ರಾಜಕಾರಣ ಮಾಡುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಸೋನಿಯಾಗಾಂಧಿ ಬಳಿಗೆ ನಿಯೋಗ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಅದಕ್ಕೆ ನಾವು ನಿಮ್ಮೊಂದಿಗೆ ಬರಲು ಸಿದ್ಧ ಎಂದುಹೇಳಿದ್ದೇವೆ.
ಬರೀ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಈಶ್ವರಪ್ಪ, ಪ್ರಹ್ಲಾದ್ ಜೋಷಿ ಯಾವೊಬ್ಬರೂ ಇದರ ನಿವಾರಣೆಗೆ ಮಾತ್ರ ಮುಂದಾಗಿಲ್ಲ ಎಂದು ಹೇಳಿದರು.
ರೈತ ಚೈತನ್ಯ ಯಾತ್ರೆ ಹೆಸರಿನಲ್ಲಿ ಬಳಸುತ್ತಿರುವ ಪದಗಳನ್ನು ನೋಡಿದರೆ ಹಿಂದೂ ಸಂಸ್ಕೃತಿಯನ್ನು ಇವರು ಯಾವ ರೀತಿ ಎತ್ತಿ ಹಿಡಿಯುತ್ತಿದ್ದಾರೆ ಎಂಬುದು ತಿಳಿಯುತ್ತಿದೆ. ಜಗದೀಶ ಶೆಟ್ಟರ್ ಅವರ ಅವಧಿಯಲ್ಲಿ ಸಾಲ ಮನ್ನಾ ಎಂದು ಘೋಷಿಸಿದ್ದರೆ ಹೊರತು ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ನೀಡಿತ್ತು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಈಗ ನಮ್ಮ ಸರ್ಕಾರ ಬಂದರೆ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಇವರದೇ ಸರ್ಕಾರವಿದೆ. ರೈತರ ಒಟ್ಟು ಸಾಲ ಸೇರಿದರೆ 8 ರಿಂದ 10 ಸಾವಿರ ಕೋಟಿಯಾಗಬಹುದು. ಅದನ್ನು ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು. ವಿಪಕ್ಷ ನಾಯಕರಾಗಿದ್ದಾಗ ನವಲಗುಂದ-ನರಗುಂದದಲ್ಲಿ ಪ್ರತಿಭಟನೆ ನಡೆಸಿ ಭಾಷಣ ಮಾಡಿದ್ದರು. ಇದೀಗ ಕೇಂದ್ರದಲ್ಲಿ ಹಾಗೂ ಗೋವಾದಲ್ಲಿ ಇವರದೇ ಸರ್ಕಾರವಿದೆ. 17 ಜನ ಬಿಜೆಪಿಯ ಎಂಪಿಗಳಿದ್ದಾರೆ. ಸುಲಭವಾಗಿ ಈ ಸಮಸ್ಯೆ ಬಗೆಹರಿಸಬಹುದಾಗಿದ್ದರೂ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.