ಕರ್ನಾಟಕ

ಸಂಪನ್ಮೂಲ ಕ್ರೂಢೀಕರಣಕ್ಕೆ ಹೆಚ್ಚು ಒತ್ತು : ಕಂದಾಯ ಅಧಿಕಾರಿ ಕಚೇರಿಗಳಿಗೆ ಸಿಸಿ ಕ್ಯಾಮೆರಾ

Pinterest LinkedIn Tumblr

cctvಬೆಂಗಳೂರು,ಅ.1- ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಹೆಚ್ಚು ಒತ್ತು ನೀಡುವಂತೆ ಮೇಯರ್ ಮಂಜುನಾಥರೆಡ್ಡಿ ಅವರು ಆದೇಶಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕಂದಾಯಾಧಿಕಾರಿಗಳ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಇಂದಿಲ್ಲಿ ತಿಳಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಎಲ್ಲ ಎಂಟು ವಲಯಗಳ ಅಧಿಕಾರಿಗಳ ಸಭೆ ನಡೆಸಿದ ರಾಜಣ್ಣ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೇಯರ್ ಅವರು ತಮ್ಮ ಮೊದಲ ದಿನದ ಭಾಷಣದಲ್ಲಿ ಪಾಲಿಕೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಪ್ರದೇಶಗಳಲ್ಲಿ ತೆರಿಗೆ ಮಾಫಿಯ ಇದೆ. ಇದಕ್ಕೆ  ಕಡಿವಾಣ ಹಾಕಬೇಕೆಂದು ಎಚ್ಚರಿಕೆ ನೀಡಿದ್ದರು. ಅವರ ಆದೇಶದಂತೆ ತೆರಿಗೆ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಕಂದಾಯಾಧಿಕಾರಿಗಳು, ಎಆರ್‌ಒಗಳು, ಆರ್‌ಐಗಳು, ತೆರಿಗೆ ಸಂಗ್ರಹಕಾರರ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಮ್ಮ ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದರು. ಸಾರ್ವಜನಿಕರು ಪಾವತಿಸುವ ತೆರಿಗೆ ಹಣ ಅವರ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗ ಆಗಬೇಕು. ಹಾಗಾಗಿ ತೆರಿಗೆ ಸಂಗ್ರಹದಲ್ಲಿ ಲೋಪವಾಗುವುದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಯಾವುದೇ ಅಧಿಕಾರಿ ತೆರಿಗೆ ಸಂಗ್ರಹದಲ್ಲಿ ಲೋಪ ಎಸಗಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಿಬಿಎಂಪಿಯಲ್ಲಿ ಪಾರದರ್ಶಕ ಆಡಳಿತ  ತರಲು ಶ್ರಮಿಸುತ್ತೇವೆ. ಜವಾನರಿಂದ ಹಿಡಿದು ದಿವಾನರವರೆಗೂ ಎಲ್ಲರೂ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲೇಬೇಕು. ಪ್ರತಿಯೊಬ್ಬರೂ ಗುರುತಿನ ಚೀಟಿ ಧರಿಸಿರಬೇಕು ಎಂದರು. ಬಯೋಮೆಟ್ರಿಕ್ ಪದ್ಧತಿ ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದ ಅವರು,  ಕಚೇರಿಗೆ ಬರುವವರೊಂದಿಗೆ ಅಧಿಕಾರಿಗಳು, ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸಬೇಕು. ಅವರ ಕೆಲಸವನ್ನು  ಮಾಡಿಕೊಡಬೇಕು, ಪೈಲ್‌ಗಳನ್ನು ಪೆಂಡಿಂಗ್ ಹಿಡಬಾರದು. ನಾವು ಯಾವುದೇ ಕ್ಷಣದಲ್ಲಾದರೂ ಕಚೇರಿಗಳಿಗೆ ದಾಳಿ ಮಾಡುತ್ತೇವೆ. ಈ ಸಮಯದಲ್ಲಿ ಪೈಲ್‌ಗಳು ಪೆಂಡಿಂಗ್ ಇದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಾರದರ್ಶಕ ಆಡಳಿತ ನೀಡುವ ಮಹದಾಸೆ ಹೊಂದಿದ್ದೇವೆ. ಇದಕ್ಕೆ ಎಲ್ಲ ಅಧಿಕಾರಿಗಳ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಭದ್ರೇಗೌಡ, ಸತ್ಯನಾರಾಯಣ್, ಮಂಜುನಾಥ್, ಹೇಮಲತಾ, ಸರಸ್ವತಮ್ಮ, ರಾಜೇಶ್ವರಿ ಚೋಳರಾಜ್, ಅನಂತಕುಮಾರ್, ಶ್ರೀಕಾಂತ್ ಮತ್ತು 8 ವಲಯಗಳ ಜಂಟಿ ಆಯುಕ್ತರು, ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Write A Comment