ಬೆಂಗಳೂರು, ಸೆ.30- ಕೇಂದ್ರ ಸರ್ಕಾರದ ಆನ್ಲೈನ್ ಫಾರ್ಮಸಿ ಮೂಲಕ ಔಷಧಿ ಮಾರಾಟ ಮಾಡುವ ಕ್ರಮ ಖಂಡಿಸಿ ಔಷಧ ವ್ಯಾಪಾರಿಗಳ ಸಂಘ ಅ.14ರಂದು ರಾಷ್ಟ್ರವ್ಯಾಪಿ ಔಷಧ ವ್ಯಾಪಾರ ಬಂದ್ ಮಾಡಲು ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳಾದ ಎಂ.ಸಿ.ಮೇದಪ್ಪ, ರಘುನಾಥರೆಡ್ಡಿ, ಎಸ್. ಶಿವಾನಂದ, ಇತ್ತೀಚೆಗೆ ಕೇಂದ್ರ ಸರ್ಕಾರ ಆನ್ಲೈನ್ ಫಾರ್ಮಸಿಯಲ್ಲಿ ಔಷಧಿ ಮಾರಾಟ ಮಾಡುವುದಕ್ಕೆ ಅನುಮತಿ ನೀಡುತ್ತಿರುವುದರಿಂದ ಚಿಲ್ಲರೆ, ಸಗಟು ಔಷಧ ವ್ಯಾಪಾರವನ್ನು ನಂಬಿಕೊಂಡು ಬದುಕುತ್ತಿರುವವರು ಬೀದಿಗೆ ಬೀಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಡ್ರಗ್ಸ್ ಮತ್ತು ಕಾಸ್ಮೊಟಿಕ್ ಆಕ್ಟ್ 1940ರಂತೆ ಯಾವುದೇ ಔಷಧಿಯನ್ನು ವಿತರಣೆ ಮಾಡುವ ಮುನ್ನ ವೈದ್ಯರ ಸಲಹೆ ಚೀಟಿಯ ಮುಖಾಂತರ ನೋಂದಾಯಿತ ಅರ್ಹ ಔಷಧ ವ್ಯಕ್ತಿಯ ಮೂಲಕ ವಿತರಿಸಬೇಕೆಂದು ನಿಯಮವಿದೆ.
ಅದನ್ನು ಉಲ್ಲಂಘಿಸಿ ಮಾರುವುದು ಅಪರಾಧ. ಆನ್ಲೈನ್ ಫಾರ್ಮಸಿ ಮೂಲಕ ಔಷಧ ವಿತರಣೆ ಮಾಡುವ ಸಂದರ್ಭದಲ್ಲಿ ಮತ್ತು ಬರುವ ಔಷಧಗಳು ಸುಲಭ ರೀತಿಯಲ್ಲಿ ಮನೆ ಬಾಗಿಲಿಗೆ ದೊರಕುವುದರಿಂದ ಯುವಜನತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಸರಿಯಾಗಿ ಔಷಧಿಗಳು ಸಿಗುವುದಿಲ್ಲ. ಜೀವರಕ್ಷಕ ಔಷಧಗಳಿಗೆ ಸಂಚಕಾರ ಉಂಟಾಗುತ್ತದೆ. ಇದನ್ನು ವಿರೋಧಿಸಿ ಅ.14ರಂದು ಔಷಧ ವ್ಯಾಪಾರ ಬಂದ್ ಮಾಡಲಾಗುವುದು. ಸಾರ್ವಜನಿಕರಿಗಾಗುವ ತೊಂದರೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.