ಹುಳಿಯಾರು, ಸೆ.30- ಪೋಷಕರ ಮುಟ್ಟಿನ ಮೌಡ್ಯದಿಂದ ಬಾಲಕಿಯೊಬ್ಬಳಿಗೆ ಬಲವಂತದಿಂದ ತಾಳಿ ಕಟ್ಟಿರುವ ಘಟನೆ ಹುಳಿಯಾರು ಹೋಬಳಿ ದಸೂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಲ್ಲಪ್ಪನಹಟ್ಟಿಯಲ್ಲಿ ನಡೆದಿದೆ.
ಋತುಮತಿ ಆಗುವ, ಮಗು ಹೆರುವ, ಮುಟ್ಟಾಗುವ ಸ್ತ್ರೀಯರನ್ನು ಗೊಲ್ಲರಹಟ್ಟಿಗಳಲ್ಲಿ ಊರಿಂದ ಹೊರಗಿಡುವ ಸಂಪ್ರದಾಯ ಇನ್ನೂ ಆಚರಣೆಯಲ್ಲಿದ್ದು, ಪೋಷಕರ ಇಂತಹ ಮೌಢ ಆಚರಣೆಗೆ ಏನೂ ಅರಿಯದ ಮುಗ್ಧ ಬಾಲಕಿ ಜೀವನ ಬಲಿಯಾಗಿರುವುದು ದುರಾದೃಷ್ಟಕರ. ಬಲ್ಲಪ್ಪನಹಟ್ಟಿಯ ಶೃತಿ ( ಹೆಸರು ಬದಲಿಸಲಾಗಿದೆ ) ಎಂಬ ಬಾಲಕಿ ಮುಟ್ಟಾಗಿದ್ದರಿಂದ ಊರಿನ ಹೊರಗೆ ಬಿಟ್ಟಿದ್ದರಿಂದ ಊರಿನ ಹೊರಗಿನ ಗುಡಿಸಲಿನಲ್ಲಿ ರಾತ್ರಿ ಮಲಗಿದ್ದಾಗ ಕಿಡಿಗೇಡಿಗಳು ಬಂದು ಅಪಹರಿಸಿದ್ದಾರೆ.
ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿ ಬಲವಂತದಿಂದ ಮೂರು ಮಂದಿ ತಾಳಿ ಸಹ ಕಟ್ಟಿದ್ದಾರೆ. ಬಾಲಕಿ ಎಷ್ಟೇ ಪ್ರತಿರೋಧ ವ್ಯಕ್ತ ಪಡಿಸಿದರೂ ಬಗ್ಗದೆ ಹೊಡೆದು-ಬಡಿದು ಮತ್ತೆ ಊರಿಗೆ ಕರೆದಂದು ಬಿಟ್ಟಿದ್ದಾರೆ. ಬಾಲಕಿಯ ಮಾಹಿತಿ ಪ್ರಕಾರ ತಾಳಿ ಕಟ್ಟಿದವರು ಅದೇ ಗ್ರಾಮದವರಾಗಿದ್ದು ಪೊಲೀಸ್ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ ಕ್ರಮ ಕೈ ಗೊಳ್ಳುವುದಿರಲಿ ಪ್ರಕರಣ ಸಹ ದಾಖಲಿಸಿಲ್ಲ ಎಂದು ಬಾಲಕಿ ಹಾಗೂ ಆಕೆಯ ತಂದೆ ಅವಲತ್ತುಕೊಂಡಿದ್ದಾರೆ.