ಬೆಂಗಳೂರು, ಸೆ.30: ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳು ವೈದ್ಯಕೀಯ ಪರೀಕ್ಷೆಗೆ ಗೈರುಹಾಜರಾಗಿದ್ದಾರೆ.
ಸಿಐಡಿ ಪೊಲೀಸರು ವೈದ್ಯಕೀಯ ಪರೀಕ್ಷೆ ಹಾಜರಾಗುವಂತೆ ಶ್ರೀಗೆ ಎರಡು ಬಾರಿ ನೋಟಿಸ್ ನೀಡಿದ್ದರು. ಆದರೆ, ಅವರು ಬುಧವಾರ ವಿಕ್ಟೋರಿಯ ಆಸ್ಪತ್ರೆಯಲ್ಲಿ ನಡೆಯಬೇಕಿದ್ದ ವೈದ್ಯಕೀಯ ಪರೀಕ್ಷೆಗೆ ಹಾಜರಾಗದೆ, ಕೊನೆಯ ಕ್ಷಣದಲ್ಲಿ ಸಿಐಡಿ ಅಧಿಕಾರಿಗಳಿಗೆ ವೈದ್ಯಕೀಯ ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ.
ರಾಘವೇಶ್ವರ ಸ್ವಾಮೀಜಿ ವೈದ್ಯಕೀಯ ಪರೀಕ್ಷೆ ನಡೆಸಲು ವಿಕ್ಟೋರಿಯ ಆಸ್ಪತ್ರೆಯ ಅಧೀಕ್ಷಕ ಡಾ.ಟಿ.ದುರ್ಗಣ್ಣ ಅವರ ನೇತೃತ್ವದಲ್ಲಿ ತಜ್ಞರ ತಂಡವನ್ನು ರಚಿಸಲಾಗಿತ್ತು. ಇದರ ಅಂಗವಾಗಿ ಸಿಐಡಿ ಅಧಿಕಾರಿಗಳ ಮೂಲಕ ಖಾಲಿ ಹೊಟ್ಟೆಯಲ್ಲಿ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲು ಸಜ್ಜಾಗಿದ್ದ ತಂಡ 1 ಗಂಟೆಯವರೆಗೆ ಕಾಯಿತು ಅವರು ಬಾರದ ಕಾರಣ ಪರೀಕ್ಷೆ ನಡೆಸದೆಯೇ ತಂಡ ನಿರ್ಗಮಿಸಿತು.
ರಾಘವೇಶ್ವರ ಸ್ವಾಮೀಜಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗದೆ ಕೊನೆಯ ಕ್ಷಣದಲ್ಲಿ ತನಿಖಾಧಿಕಾರಿ ಅಶೋಕ್ ಕುಮಾರ್ ಅವರಿಗೆ ಪತ್ರ ಬರೆದು ಪುರುಷತ್ವ ಪರೀಕ್ಷೆಯಿಂದ ಸನ್ಯಾಸತ್ವಕ್ಕೆ ಧಕ್ಕೆ ಆಗುತ್ತದೆ. ಆದ್ದರಿಂದ ಪರೀಕ್ಷೆ ಕೈಬಿಡಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಸ್ವಾಮೀಜಿ ಈಗಾಗಲೇ ಹಲವು ಪರೀಕ್ಷೆಗಳಿಗೆ ಒಳಗಾಗಿದ್ದು, ರಕ್ತ ಪರೀಕ್ಷೆ, ಡಿಎನ್ಎ ಪರೀಕ್ಷೆ ನಡೆಸಲಾಗಿದೆ.
ಮತ್ತೊಮ್ಮೆ ಪುರುಷತ್ವ ಪರೀಕ್ಷೆಯ ಅಗತ್ಯತೆವಿಲ್ಲ. ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿದ್ದು, ಅದು ಇನ್ನೂ ನಮ್ಮ ಕೈ ಸೇರಿಲ್ಲ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ಜೊತೆಗೆ, ಸಿಐಡಿ ನಡೆಸಲು ಉದ್ದೇಶಿಸಿರುವ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಯ ಹಂತದಲ್ಲಿದ್ದು, ವಿಚಾರಣೆ ಮುಗಿಯುವವರೆಗೆ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ಸ್ವಾಮೀಜಿ ಪತ್ರದಲ್ಲಿ ತಿಳಿಸಿದ್ದಾರೆ. ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಡೆಸಿದ ಎಲ್ಲ ತನಿಖೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗಿದೆ. ಹೈಕೋರ್ಟ್ನಲ್ಲಿ ನಮ್ಮ ಅರ್ಜಿಯ ವಿಚಾರಣೆಯ ನಂತರ ಪರೀಕ್ಷೆ ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ. ವಿಕ್ಟೋರಿಯ ಅಸ್ಪತ್ರೆಯ ಅಧೀಕ್ಷಕ ಡಾ.ಟಿ.ದುರ್ಗಣ್ಣ ಮಾತನಾಡಿ, ಸ್ವಾಮೀಜಿ ಕಳುಹಿಸಿರುವ ಪತ್ರ ನಮಗೆ ಸಿಕ್ಕಿಲ್ಲ. ಅವರಿಗಾಗಿ ಒಂದು ಗಂಟೆಯವರೆಗೆ ಕಾದಿದ್ದು, ಅವರು ವೈದ್ಯಕೀಯ ಪರೀಕ್ಷೆ ಹಾಜರಾಗದ ಕುರಿತು ಸಿಐಡಿ ಅಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದು ಹೇಳಿದರು.