ಬೆಂಗಳೂರು, ಸೆ.28- ಅವೈಜ್ಞಾನಿಕ ಟೋಲ್ ಪದ್ಧತಿಯನ್ನು ವಿರೋಧಿಸಿ ವಾರ್ಷಿಕ ಟೋಲ್ ಪದ್ಧತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಅಕ್ಟೋಬರ್ 1 ರಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಿ.ಆರ್.ಷಣ್ಮುಗಪ್ಪ ಹಾನಿ ಇರುವ ಟೋಲ್ ಸಂಗ್ರಹ ಪದ್ಧತಿಯಿಂದ ಲಾರಿ ಮಾಲೀಕರಿಗೆ ತೀವ್ರ ಕಿರುಕುಳವಾಗುತ್ತಿದೆ. ಸಾಗಣೆದಾರರು ಟೋಲ್ ಪಾವತಿಸಲು ವಿರೋಧಿಸುತ್ತಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಲಲ್ಲಿ ಟೋಲ್ ಬೂತ್ಗಳನ್ನು ಸ್ಥಾಪಿಸಿ, ಹಗಲು ದರೋಡೆ ನಡೆಸುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಆದ ಕಾರಣ ದೇಶದ ಆಂತರಿಕ ಉತ್ಪಾದನಾ ಶಕ್ತಿಯ ಶೇ.3 ರಷ್ಟು ಅಂದರೆ ಸುಮಾರು 87 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಆದ್ದರಿಂದ ವಾರ್ಷಿಕ ಟೋಲ್ ಜಾರಿ ಗೊಳಿಸುವಂತೆ ಅವರು ಒತ್ತಾಯಿಸಿದರು. ಟೋಲ್ ರಸ್ತೆಗೆ ಮಾತ್ರ ಕೇವಲ ಐದು ವರ್ಷಗಳ ಖಾತ್ರಿ ನೀಡುತ್ತಿರುವ ಸರ್ಕಾರ ಟೋಲ್ ಸಂಗ್ರಹಣಾ ಅವಧಿಯೂ ಐದರಿಂದ ಆರು ವರ್ಷಗಳಲ್ಲಿ ಮುಗಿಯಬೇಕು. ಆದರೆ ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳವರೆಗೆ ಟೋಲ್ ಸಂಗ್ರಹ ಮಾಡಲು ಅನುಮತಿ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರೋಕ್ಷವಾಗಿ ಟೋಲ್ ಗುತ್ತಿಗೆದಾರರಿಗೆ ಹಣ ಕೊಳ್ಳೆಹೊಡೆಯಲು ಅನುಕೂಲ ಮಾಡಿಕೊಡುತ್ತಿವೆ ಎಂದು ಆರೋಪಿಸಿದರು.
ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯು ಹೆಚ್ಚುತ್ತಿರುವ ಪರಿಣಾಮ ಟೋಲ್ ಸಂಗ್ರಹವು ಏರುತ್ತಿರುವುದಲ್ಲದೆ ಪ್ರತಿವರ್ಷ ಪರಿಷ್ಕರಣೆ ಮಾಡುತ್ತಿರುವ ಹಿನ್ನೆಲೆ ಇದೀಗ ಶೇ. 60ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. ಅಲ್ಲದೆ ಟೋಲ್ ಸಂಗ್ರಹಣೆ ಕುರಿತು ಪಾರದರ್ಶಕತೆ ಇಲ್ಲದಂ ತಾಗಿದೆ. ವಾರ್ಷಿಕ ಟೋಲ್ ಪರವಾನಿಗೆ ನೀಡಬೇಕೆಂದು ಒತ್ತಾಯಿಸಿದರು. ವಾರ್ಷಿಕ ಟೋಲ್ ಪರವಾನಿಗೆ ನೀಡಿದರೆ ಡೀಸೆಲ್ ಹಾಗೂ ಸಮಯದ ಉಳಿತಾಯವಾಗುತ್ತದೆ. ಕಿ.ಮೀ. ವೃದ್ದಿಸಬಹುದು. ಸಾಗಾಣಿಕಾ ವೆಚ್ಚ ಕಡಿಮೆ ಮಾಡಬಹುದು. 1 ಲಕ್ಷ ಕೋಟಿಗೂ ಹೆಚ್ಚು ಇಂಧನ ಉಳಿತಾಯವಾಗುವ ಸಾಧ್ಯತೆ ಇದೆ. ಗರಿಷ್ಠ ಇಂಧನ ಉಳಿತಾಯ ಜೊತೆ ಪರಿಸರದ ಮಾಲಿನ್ಯಕ್ಕೂ ತಡೆಯಾಗುತ್ತದೆ. ಖಾಸಗಿ ವಾಹನಗಳು ಹೆದ್ದಾರಿಯಲ್ಲಿ ಸುಗಮವಾಗಿ ಚಲಿಸಲು ಅನುಕೂಲವಾಗು ತ್ತದೆ. ಈ ಎಲ್ಲಾ ಬೇಡಿಕೆಗಳನ್ನಿಟ್ಟುಕೊಂಡು ಅ.1 ರಿಂದ ಅನಿರ್ಧಿಷ್ಟಿತ ಕಾಲ ಲಾರಿ ಮುಷ್ಕರ ಆರಂಭಿಸಲಾಗುತ್ತದೆ. ಪತ್ರಿಕಾ ಗೋಷ್ಠಿಯಲ್ಲಿ ಕೆ.ಜಿ.ರವೀಂದ್ರ, ಎಸ್.ಪಿ.ವಿಜು, ಡಿ.ಜಿ.ಶಿವಣ್ಣ, ಭೈರಪ್ಪ ಸಿದ್ದರಾಮಯ್ಯ ಮುಂತಾದವರು ಇದ್ದರು.