ಕರ್ನಾಟಕ

ಬಾಂಬ್ ಸ್ಫೋಟದ ಸಂದೇಶ: ಆರೋಪಿಯ ಬಂಧನ

Pinterest LinkedIn Tumblr

arrestಶಿವಮೊಗ್ಗ, ಸೆ.27: ‘ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟವಾಗಲಿದೆ’ ಎಂದು ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿನೋಬನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ವಿನೋಬನಗರ ಬಡಾವಣೆಯ ನಿವಾಸಿ ಮಂಜುನಾಥ(28) ಬಂಧಿತ ಆರೋಪಿ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪೊಲೀಸ್ ಇಲಾಖೆಯ ನಿದ್ದೆಗೆಡುವಂತೆ ಮಾಡಿದ್ದ ಬಾಂಬ್ ಸ್ಫೋಟ ಸಂದೇಶದ ಪ್ರಕರಣವನ್ನು ಭೇದಿಸುವಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್, ಸಬ್ ಇನ್ಸ್‌ಪೆಕ್ಟರ್ ಅಭಯಪ್ರಕಾಶ್ ಸೋಮನಾಳ್ ಯಶಸ್ವಿಯಾಗಿದ್ದಾರೆ.

‘ವಿನೋಬನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಗಸ್ತು ನಡೆಸುತ್ತಿದ್ದಾಗ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ 5 ಬಾಂಬ್‌ಗಳು ಪತ್ತೆಯಾಗಿವೆ. ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಎರಡು ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಾಳೆ ಸಂಜೆ 7 ಗಂಟೆಗೆ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟವಾಗಲಿದೆ’ ಎಂಬ ಸಂದೇಶವನ್ನು ಮಂಜುನಾಥ್ ಸೆ. 22ರಂದು ವಾಟ್ಸ್‌ಆ್ಯಪ್‌ನಲ್ಲಿ ಹರಿಯಬಿಟ್ಟಿದ್ದ. ಈ ಸಂದೇಶವು ವಾಟ್ಸ್‌ಆ್ಯಪ್‌ನಲ್ಲಿ ಶರವೇಗದಲ್ಲಿ ಹರಿದಾಡಲಾರಂಭಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಸಂದೇಶ ಕಳುಹಿಸಿದ ವ್ಯಕ್ತಿಯ ಪತ್ತೆಗೆ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದ್ದರು. ಈ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ತಂತ್ರಜ್ಞಾನದ ನೆರವಿನೊಂದಿಗೆ ಮಂಜುನಾಥನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment