ಕರ್ನಾಟಕ

ಕಳಸಾ ಬಂಡೂರಿಗಾಗಿ ಕರ್ನಾಟಕ ಬಂದ್ : ಎಲ್ಲೆಡೆ ವ್ಯಾಪಕ ಬೆಂಬಲ; ಪ್ರಯಾಣಿಕರ ಪರದಾಟ

Pinterest LinkedIn Tumblr

bandh

ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ, ರೈತ ಹಾಗೂ ವಾಣಿಜ್ಯ ಸಂಘಟನೆಗಳು ಕರೆ ಶನಿವಾರ ನೀಡಿರುವ ಕರ್ನಾಟಕ ಬಂದ್‍ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಧಾರವಾಡ, ಬಳ್ಳಾರಿ, ರಾಯಚೂರು, ದಾವಣಗೆರೆ, ತುಮಕೂರು ಮತ್ತು ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳಲ್ಲಿ ಬಂದ್ ಗೆ ಜನರಿಂದ ಪೂರ್ಣ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನು ಕಳಸಾಬಂಡೂರು ನಾಲಾ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ರೈತಪರ ಸಂಘಟನೆಗಳು ನಗರದ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ನಿಂದಾಗಿ ಬಸ್ ಗಳ ಸಂಚಾರವಿಲ್ಲದೆ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾಕಷ್ಟು ಪ್ರಯಾಣಿಕರು ನೆರೆದಿದ್ದು, ಬಸ್ ಸೇವೆ ಇಲ್ಲದೆ ಪರದಾಡುವಂತಾಗಿದೆ.

ಭಾರಿ ಪೊಲೀಸ್ ಬಂದೋಬಸ್ತ್

bandh1

ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯವ್ಯಾಪಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕರ್ನಾಟಕ ಬಂದ್‍ಗೆ 1300ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಾರ್ವಜನಿಕ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ತಿಂಗಳ 4ನೇ ಶನಿವಾರ ಆಗಿರುವುದರಿಂದ ಅಧಿಕೃತ ರಜೆ ಇರುವುದರಿಂದ ಬ್ಯಾಂಕ್‍ಗಳೂ ಕಾರ್ಯನಿರ್ವಹಿಸುವುದಿಲ್ಲ. ವಿಶೇಷವಾಗಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ವಿವಿಧ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ.

ಕನ್ನಡ ಚಳವಳಿ ಸಂಘಟನೆ ನೇತೃತ್ವದಡಿ ಎಲ್ಲಾ ಕನ್ನಡಪರ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. ಜತೆಗೆ ಎಫ್ ಕೆಸಿಸಿಐ, ಚಿತ್ರೋದ್ಯಮ, ಕಾರ್ಮಿಕ ಸಂಘಟನೆಗಳು ಸೇರಿದಂತೆ ನೂರಾರು ಸಂಘಟನೆಗಳು ಬಂದ್ ಯಶಸ್ವಿಗೆ ಪಣತೊಟ್ಟಿವೆ. ಆಟೋರಿಕ್ಷಾ ಚಾಲಕರು ಹೋರಾಟದಲ್ಲಿ ಪಾಲ್ಗೊಳ್ಳುವುದರಿಂದ ಸಂಚಾರಕ್ಕೆ ಸಂಚಕಾರ ಒದಗಲಿದೆ. ಪೆಟ್ರೋಲ್ ಬಂಕ್ ಉದ್ಯಮಿಗಳೂ ಹೋರಾಟ ಬೆಂಬಲಿಸಿ ಬಂಕ್ ಬಂದ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಯಾವುದೇ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸುವುದಿಲ್ಲ. ಚಿತ್ರ ಮಂದಿರಗಳೂ ತೆರೆದಿರುವುದಿಲ್ಲ.

ಲಾರೀ ಮಾಲೀಕರು ಬಂದ್‍ನಲ್ಲಿ ಪಾಲ್ಗೊಳ್ಳುವುದರಿಂದ ಅಗತ್ಯ ವಸ್ತುಗಳ ಸರಬರಾಜು ತುಸು ಕಷ್ಟವಾಗಲಿದೆ. ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿ ಜನ ಜೀವನ ಸ್ತಬಟಛಿವಾಗುವ ಎಲ್ಲಾ ಮುನ್ಸೂಚನೆ ನಿಚ್ಚಳವಾಗಿವೆ. ಬೆಂಗಳೂರಲ್ಲಿ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಎನ್‍ಡಬ್ಲ್ಯೂಕೆಎಸ್‍ಆರ್ ಟಿಸಿ, ಎನ್‍ಇಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ಇರುವುದಿಲ್ಲ. ಎಲ್ಲಾ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಆದರೆ, ಸಂಚಾರ ಇರುವುದಿಲ್ಲ. ಒಂದು ವೇಳೆ ಅಧಿಕಾರಿಗಳು ಒತ್ತಡಕ್ಕೆ ಮಣಿದು ಬಸ್ ಚಾಲನೆ ಮಾಡಿದರೆ ಅಡ್ಡಿ ಪಡಿಸುವ ಸಾಧ್ಯತೆಗಳಿವೆ. ಹಾಗಾಗಿ ಸಂಚಾರ ಸ್ಥಗಿತಗೊಳಿಸಲು ಕಾರ್ಮಿಕರು ನಿರ್ಧರಿಸಿದ್ದಾರೆ.

Write A Comment