ಕರ್ನಾಟಕ

ಉಪ ನಗರ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಸಿ.ಎಂ. ಮನವಿ

Pinterest LinkedIn Tumblr

Railllllನವದೆಹಲಿ: ಬೆಂಗಳೂರು– ಮೈಸೂರು ಜೋಡಿ ಮಾರ್ಗದ ಉಳಿದಿರುವ ಕಾಮಗಾರಿ ಎರಡು ತಿಂಗಳಲ್ಲಿ ಮುಗಿಯಲಿದ್ದು, ಜನವರಿ ತಿಂಗಳಲ್ಲಿ ಉದ್ಘಾಟನೆಗೆ ಮುಹೂರ್ತ ನಿಗದಿ ಆಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈಲ್ವೆ ಸಚಿವ ಸುರೇಶ್‌ ಪ್ರಭು ಗುರುವಾರ ಈ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ರೈಲ್ವೆ ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳಿಗೆ ಸಂಬಂಧಿಸಿದ ಮನವಿ ಪತ್ರ ಸಲ್ಲಿಸಿದರು.

ಬೆಂಗಳೂರು– ಮೈಸೂರು ಜೋಡಿ ಮಾರ್ಗ ಬಹುತೇಕ ಮುಗಿದಿದೆ. ಶ್ರೀರಂಗಪಟ್ಟಣದ ಬಳಿ ಟಿಪ್ಪು ಶಸ್ತ್ರಾಗಾರ ಸ್ಥಳಾಂತರದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಈ ಕೆಲಸ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ಉದ್ಘಾಟನೆಗೆ ದಿನ ನಿಗದಿ ಮಾಡುವಂತೆ ಸಚಿವರು ಹೇಳಿರುವುದಾಗಿ ತಿಳಿಸಿದರು.

ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಅನುಮತಿ ಕೊಡುವುದು ಬೇಡ ಎಂದು ಸುಪ್ರೀಂ ಕೋರ್ಟ್‌ ನೇತೃತ್ವದ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಈ ರೈಲು ಮಾರ್ಗ ಅತ್ಯಂತ ಮಹತ್ವದಾಗಿದ್ದು ಯೋಜನೆ ಕಾರ್ಯಗತಗೊಳಿಸಲು ಯತ್ನ ನಡೆಸುವಂತೆ ಅವರು ಕೋರಿದ್ದಾರೆ.

ಬೆಂಗಳೂರು ಉಪ ನಗರ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಈ ಯೋಜನೆ ಜಾರಿಯಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೆ, ರಾಜಧಾನಿ ಸುತ್ತಮುತ್ತಲಿರುವ ಉಪ ನಗರಗಳು ಅಭಿವೃದ್ಧಿ ಆಗಲಿವೆ. ರೈಟ್ಸ್‌ ಸಂಸ್ಥೆ ನಡೆಸಿರುವ ಸಮೀಕ್ಷೆ ಉಪ ನಗರ ರೈಲು ಯೋಜನೆ ಕಾರ್ಯಸಾಧು ಎಂದಿದೆ ಎಂದೂ ವಿವರಿಸಿದರು.

ಉಪ ನಗರ ರೈಲು ಯೋಜನೆಗೆ ₹8,500 ಕೋಟಿ ಅಗತ್ಯವಿದೆ. ಬೆಂಗಳೂರು ದೇಶದ ದೊಡ್ಡ ಮಾಹಿತಿ ತಂತ್ರಜ್ಞಾನ ನಗರವಾಗಿದ್ದು ವಿದೇಶಿ ವಿನಿಮಯ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಉಪ ನಗರ ರೈಲು ಯೋಜನೆಯಿಂದ ಸುಮಾರು 25 ಲಕ್ಷ  ಜನರಿಗೆ ಅನುಕೂಲವಾಗಲಿದೆ ಎಂದರು.
ಮನವಿ ಆಲಿಸಿದ ಸಚಿವರು ಉಪ ನಗರ ರೈಲು ಯೋಜನೆ ತಾಂತ್ರಿಕವಾಗಿ ಕಾರ್ಯಸಾಧುವೇ ಎಂದು ಪರಿಶೀಲಿಸುವುದಾಗಿ ಆಶ್ವಾಸನೆ ನೀಡಿದರು ಎಂದರು.

Write A Comment