ಕರ್ನಾಟಕ

ವಿರೋಧಿಗಳ ಜತೆ ಸೇರಿದ ಪಾಲಿಕೆ ವಕೀಲರು: ಸಂವಾದ ಕಾರ್ಯಕ್ರಮದಲ್ಲಿ ಮೇಯರ್‌ ಮಂಜುನಾಥ್‌ ರೆಡ್ಡಿ ಆಕ್ರೋಶ

Pinterest LinkedIn Tumblr

MAYORಬೆಂಗಳೂರು: ‘ಕೋರ್ಟ್ ಪ್ರಕರಣಗಳಲ್ಲಿ ಪಾಲಿಕೆ ಪರವಾಗಿ ನಿಲ್ಲಬೇಕಾಗಿದ್ದ ಕಾನೂನು ಘಟಕದ ಕೆಲವು ವಕೀಲರು ಪ್ರತಿವಾದಿಗಳ ಜತೆ ಶಾಮೀಲು ಆಗಿರುವುದು ನೂರಕ್ಕೆ ನೂರರಷ್ಟು ಸತ್ಯ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ವರಮಾನ ಸೋರಿಕೆಯಾಗಿದ್ದು, ಕೆಲವು ಆಸ್ತಿಗಳೂ ಕೈತಪ್ಪಿವೆ’.

ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಅವರು ಮುಕ್ತ ಮನಸ್ಸಿನಿಂದ ಹೇಳಿದ ಮಾತಿದು. ಪ್ರೆಸ್‌ ಕ್ಲಬ್‌ ಹಾಗೂ ವರದಿಗಾರರ ಕೂಟ ಗುರುವಾರ ಜತೆಯಾಗಿ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಪ್ರತಿನಿಧಿಸಿದ್ದ ವಕೀಲರೊಬ್ಬರು 30 ವಿಚಾರಣೆಗಳಿಗೆ ಗೈರು ಹಾಜರಾಗಿದ್ದರು. ಅಲ್ಲದೆ, ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ನೋಟಿಸ್‌ ನೀಡುವ ಅಗತ್ಯವಿಲ್ಲದಿದ್ದರೂ ತಪ್ಪಿತಸ್ಥ ಸಂಸ್ಥೆಗಳಿಗೆ ನೋಟಿಸ್‌ ಕೊಡಲು ಸಲಹೆ ನೀಡಿ, ಎದುರಾಳಿಗಳಿಗೆ ಕೋರ್ಟ್‌ ಮೆಟ್ಟಿಲೇರಲು ದಾಖಲೆ ಸೃಷ್ಟಿಸಿಕೊಟ್ಟಿದ್ದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗುತ್ತಿಗೆ ಆಧಾರದ ಮೇಲೆ ನೀಡಲಾದ ಪಾಲಿಕೆ ಆಸ್ತಿಗಳಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳನ್ನು ಇಟ್ಟಿಲ್ಲ. ಗುತ್ತಿಗೆ ಒಪ್ಪಂದವನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಲ್ಲ’ ಎಂದು ಕಿಡಿ ಕಾರಿದರು. ‘ಆಡಳಿತಾಧಿಕಾರಿ ಅವರ ಅವಧಿಯಲ್ಲೇ ಸೋಮಾರಿ ವಕೀಲರನ್ನು ಹೊರಗೆ ಹಾಕಲಾಗಿದೆ. ಪ್ರಾಮಾಣಿಕರಾದ ಹಿರಿಯ ವಕೀಲರನ್ನು ಕಾನೂನು ಘಟಕಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಪಾಲಿಕೆ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದೆ. ಸಿಬ್ಬಂದಿ ವೇತನ, ದೂರವಾಣಿ ಬಿಲ್‌ ಕಟ್ಟಲೂ ಹಣ ಇಲ್ಲದ ದಿನಗಳೂ ಎದುರಾಗಿವೆ. ಸೋರಿಕೆಯನ್ನು ತಡೆಗಟ್ಟಿ ಪಾಲಿಕೆಯನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಿದ್ದು, ಅದೇ ನನ್ನ ಆದ್ಯತೆಯಾಗಿದೆ’ ಎಂದು ಹೇಳಿದರು. ‘600ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನು ಪಾಲಿಕೆ ಹೊಂದಿದೆ. ಇಷ್ಟೊಂದು ಖಾತೆಗಳನ್ನು ಏಕೆ ತೆರೆಯಲಾಗಿದೆಯೋ ಗೊತ್ತಿಲ್ಲ. ಒಂದೊಂದು ಇಲಾಖೆಗೆ ಒಂದೇ ಖಾತೆ ಎಂಬ ನಿಯಮ ಜಾರಿಗೆ ತರಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಸುಗಮ ಸಂಚಾರಕ್ಕಾಗಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕಿದೆ. ನಗರಕ್ಕೆ ಅಂಟಿದ ಕಸದ ಕಳಂಕ ತೊಳೆಯಲು ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ರೂಪಿಸಬೇಕಿದೆ’ ಎಂದು ತಮ್ಮ ಮುಂದಿರುವ ಇತರ ಆದ್ಯತೆಗಳ ಪಟ್ಟಿ ಮಾಡಿದರು. ‘ರಸ್ತೆ ಇತಿಹಾಸ ಅಳವಡಿಕೆ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದೆ. ಬಿಡಿಎ ನಿರ್ಮಿಸಿದ ಬಡಾವಣೆ ರಸ್ತೆಗಳ ವಿವರ ಅಳವಡಿಕೆ ಮಾತ್ರ ಬಾಕಿ ಇದೆ. ಆದಷ್ಟು ಬೇಗ ರಸ್ತೆ ಹೊಸ ವ್ಯವಸ್ಥೆ ಬಳಸಿಕೊಂಡು ಕಾಮಗಾರಿ ಅನುಷ್ಠಾನದಲ್ಲಿ ಪಾರದರ್ಶಕತೆ ತರಲಾಗುವುದು’ ಎಂದು  ಭರವಸೆ ನೀಡಿದರು.

‘ಹಲವು ವರ್ಷಗಳಿಂದ ನಡೆಯದ ದುರಸ್ತಿ ಕಾರ್ಯ, ಕಳಪೆ ಕಾಮಗಾರಿ, ವಿವಿಧ ಸಂಸ್ಥೆಗಳಿಂದ ಸೇವಾ ಮಾರ್ಗ ಅಳವಡಿಕೆಗೆ ಅಗೆತ, ನೀರಿನ ಸೋರಿಕೆ ಮೊದಲಾದ ಕಾರಣಗಳಿಂದ ನಗರದ ರಸ್ತೆಗಳು ಹಾಳಾಗಿವೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ವಿಶೇಷ ಅನುದಾನದಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.

‘ರೆಸಿಡೆನ್ಸಿ ರಸ್ತೆಯಲ್ಲಿ ಒಂದೆಡೆ ಟೆಂಡರ್‌ ಶ್ಯೂರ್‌ ಕಾಮಗಾರಿ ನಡೆದಿದ್ದು, ಇನ್ನೊಂದೆಡೆ ಶಾಲೆಗಳ ವಾಹನಗಳು ರಸ್ತೆ ಆಕ್ರಮಿಸಿ ನಿಂತಿರುತ್ತವೆ. ಇದರಿಂದ ಸಂಚಾರ ದುಸ್ತರವಾಗಿದೆ. ಶಾಲಾ ಮೈದಾನಗಳಲ್ಲೇ ವಾಹನ ನಿಲ್ಲಿಸುವಂತೆ ಆಡಳಿತ ಮಂಡಳಿಗಳಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು. ‘ಐದು ವರ್ಷಗಳ ಕಾಲ ಜೆಡಿಎಸ್‌ ಜತೆ ‘ದೋಸ್ತಿ’ ಮುಂದುವರಿಯಲಿದೆ’ ಎಂದು  ಸ್ಪಷ್ಟಪಡಿಸಿದರು.

*
ಧಾರ್ಮಿಕ ಕಟ್ಟಡಗಳ ತೆರವಿಗೆ ಕ್ರಮ
‘ಫುಟ್‌ಪಾತ್‌ ಮೇಲಿರುವ ದೇವಸ್ಥಾನ, ಚರ್ಚ್‌, ಮಸೀದಿಗಳನ್ನು ಸ್ಥಳೀಯರ ಮನವೊಲಿಸಿ ತೆರವು ಮಾಡಲಾಗುವುದು’ ಎಂದು ಮೇಯರ್‌ ಹೇಳಿದರು. ‘ಫುಟ್‌ಪಾತ್‌ ಮೇಲೆ ಧಾರ್ಮಿಕ ಕಟ್ಟಡಗಳೂ ಸೇರಿದಂತೆ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ ಬಹುಹಿಂದೆಯೇ ನೀಡಿದೆ. ಅದನ್ನು ಅನುಷ್ಠಾನಕ್ಕೆ ತರಬೇಕಿದೆ.

ಆದರೆ, ಧಾರ್ಮಿಕ ಕಟ್ಟಡಗಳ ತೆರವಿಗೆ ಮುಂದಾದೊಡನೆ ಪ್ರತಿಭಟನೆಗಳು ಹೆಚ್ಚುತ್ತವೆ, ಸಮಸ್ಯೆ ಉದ್ಭವವಾಗುತ್ತದೆ’ ಎಂದು ವಿವರಿಸಿದರು. ‘ಸ್ಥಳೀಯರ ಮನವೊಲಿಸಿ ಫುಟ್‌ಪಾತ್‌ಗಳನ್ನು ಕಟ್ಟಡಗಳಿಂದ ಮುಕ್ತಗೊಳಿಸಲಾಗುವುದು’ ಎಂದು ಭರವಸೆ ನೀಡಿದರು. ‘ಬೀದಿಬದಿ ವ್ಯಾಪಾರಿಗಳಿಗೆ ಸಾಧ್ಯವಾದ ಕಡೆಗಳಲ್ಲಿ ಮಾರುಕಟ್ಟೆ ಸೌಲಭ್ಯ (ಹಾಕರ್‌್ಸ ಜೋನ್‌) ಕಲ್ಪಿಸಲಾಗುವುದು’ ಎಂದು ಹೇಳಿದರು.

*
ಸಾಮಾನ್ಯರಿಗೂ ನೆರವು
‘ಮೇಯರ್‌ ನಿಧಿಯಿಂದ ನೆರವು ಪಡೆಯಲು ಶಾಸಕರು–ಪಾಲಿಕೆ ಸದಸ್ಯರಿಂದ ಶಿಫಾರಸು ಪತ್ರ ತರಲೇಬೇಕು ಎನ್ನುವ ಕಡ್ಡಾಯ ಏನಿಲ್ಲ. ಜನಸಾಮಾನ್ಯರು ನೇರವಾಗಿ ಬಂದು ಅರ್ಜಿ ಕೊಟ್ಟರೂ ನೆರವು ನೀಡುತ್ತೇನೆ’ ಎಂದು ಅವರು ಹೇಳಿದರು.

‘ನಗರೋತ್ಥಾನ ಅನುದಾನದಲ್ಲಿ ಬಹುಮಹಡಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದ ಅವರು, ‘ನಗರದ ವಿವಿಧೆಡೆ ಪಾರ್ಕಿಂಗ್‌ ಶುಲ್ಕ ಆಕರಿಸಿ, ಅಗತ್ಯ ಸೌಲಭ್ಯ ನೀಡಲಾಗುತ್ತದೆ. ಖಾಸಗಿಯವರ ಪಾಲಾಗುತ್ತಿರುವ ಆದಾಯವನ್ನು ಪಾಲಿಕೆ ಸಂಗ್ರಹಿಸಿದರೆ ತಪ್ಪೇನು’ ಎಂದು ಪ್ರಶ್ನಿಸಿದರು.

ತಡೆಹಿಡಿಯಲಾದ ಕಾಮಗಾರಿಗಳಿಗೆ ಮತ್ತೆ ಚಾಲನೆ ನೀಡಲು ₹ 250 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದು ಹೇಳಿದರು.ಪೂರ್ವ–ಪಶ್ಚಿಮ, ಉತ್ತರ–ದಕ್ಷಿಣ ಕಾರಿಡಾರ್‌ ನಿರ್ಮಾಣ ಮಾಡಲು ಸರ್ಕಾರ ಉತ್ಸುಕವಾಗಿದೆ ಎಂದರು.

Write A Comment