ಬೆಂಗಳೂರು, ಸೆ. 23: ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನದ ಹೋರಾಟದಲ್ಲಿ ಪಾಲ್ಗೊಂಡು ಸಮಸ್ಯೆ ಬಗೆಹರಿಸಿಕೊಡುವಂತೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ರೈತ ಮುಖಂಡರು ಆಹ್ವಾನ ನೀಡಿದ್ದಾರೆ.
ಬುಧವಾರ ಬೆಳಗ್ಗೆ ನಗರದ ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ನವಲಗುಂದ-ನರಗುಂದ ಭಾಗದ ರೈತ ಮುಖಂಡರು ಮಾಡಿದ ಮನವಿಗೆ ಸ್ಪಂದಿಸಿದ ಅವರು, ಸೆ.28ರಂದು ಹೋರಾಟದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದರು.
ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ನಿಯೋಗ ತೆರಳಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಾನು ಪ್ರಾಮಾಣಿಕವಾಗಿ ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಯತ್ನಿಸುತ್ತೇನೆ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಹಾಗೂ ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನ ಪಡಲಿ, ರಾಜ್ಯದ 17 ಬಿಜೆಪಿ ಸಂಸದರು ಸರಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದರು.
ರೈತ ಚೈತನ್ಯ ಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ನೆರೆದಿದ್ದ ಸಾವಿರಾರು ಜನರು, ಈ ಭಾಗದ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿರುವುದನ್ನು ತನ್ನ ಗಮನಕ್ಕೆ ತಂದಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಸೆ.27ರಂದು ಹರಪ್ಪನಹಳ್ಳಿಯಲ್ಲಿ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಬಳಿಕ ಮಾತನಾಡಿದ ರೈತ ಮುಖಂಡ ಈಶ್ವರಚಂದ್ರ, ನಮ್ಮ ಹೋರಾಟಕ್ಕೆ ಯಡಿಯೂರಪ್ಪ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಪ್ರಧಾನಮಂತ್ರಿ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಇನ್ನಿತರ ಪ್ರಮುಖ ನಾಯಕರೊಂದಿಗೆ ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು.
ಹಾಲಿನ ದರ ಏರಿಕೆಗೆ ಬಿಎಸ್ವೈ ವಿರೋಧ
ಬೆಂಗಳೂರು, ಸೆ. 23: ಹಾಲಿನ ಡೈರಿಗಳು ನಷ್ಟದಲ್ಲಿರುವ ಕಾರಣ ನೀಡಿ ಸರಕಾರ ಹಾಲಿನ ದರವನ್ನು ಏರಿಕೆ ಮಾಡಲು ಹೊರಟಿರುವುದು ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸಹಕಾರಿ ಹಾಲು ಒಕ್ಕೂಟಗಳು ರೈತರಿಂದ ಈ ಹಿಂದೆ ಪ್ರತಿ ಲೀಟರ್ಗೆ 24 ರೂ.ಗಳಂತೆ ಖರೀದಿ ಮಾಡುತ್ತಿದ್ದವು. ಆದರೆ, ಈಗ ಪ್ರತಿ ಲೀಟರ್ ಹಾಲನ್ನು ಕೇವಲ 19 ರೂ.ಗಳಂತೆ ಕೆಎಂಎಫ್ ಖರೀದಿಸುತ್ತಿದೆ. ಕೆಲವು ಜಿಲ್ಲೆಗಳಲ್ಲಿ ವಾರದಲ್ಲಿ ಒಂದು ದಿನ ರೈತರಿಂದ ಹಾಲು ಖರೀದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖರೀದಿಸಿದ ಹಾಲಿಗೂ ಸಮರ್ಪಕವಾಗಿ ರೈತರಿಗೆ ಹಣ ಪಾವತಿಸುವಲ್ಲಿ ಕೆಎಂಎಫ್ ವಿಫಲವಾಗಿದೆ. ಕಳೆದ ಹಲವು ತಿಂಗಳುಗಳಿಂದ ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹಧನ ಸುಮಾರು 229.32 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ಆದರೆ, ಗ್ರಾಹಕರಿಗೆ ಹಾಲನ್ನು ಕೊಬ್ಬಿನಾಂಶ ಆಧಾರಿತವಾಗಿ 30 ರೂ.ರಿಂದ 36 ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ರಾಜ್ಯ ಸರಕಾರ ಕೆಎಂಎಫ್ ಸಂಸ್ಥೆ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೆಎಂಎಫ್ ಆಡಳಿತ ವೈಫಲ್ಯದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಹಾಲಿನ ದರ ಹೆಚ್ಚಳಕ್ಕೆ ಅವಕಾಶ ಕೊಡುವುದಿಲ್ಲ. ಇದರ ವಿರುದ್ಧ ರಾಜ್ಯಾದ್ಯಂತ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.