ಅಂತರಾಷ್ಟ್ರೀಯ

ಪ್ರಧಾನಿ ಮೋದಿ ಪ್ರವಾಸ ಐರ್ಲೆಂಡ್‌ಗೆ ಭೇಟಿ

Pinterest LinkedIn Tumblr

1videshiಡಬ್ಲಿನ್, ಸೆ.23: ದ್ವಿರಾಷ್ಟ್ರ ಪ್ರವಾಸದ ಅಂಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌ಗೆ ಬಂದಿಳಿದರು.
ಒಂದು ದಿನದ ಭೇಟಿಗಾಗಿ ಐರ್ಲೆಂಡ್ ತಲುಪಿರುವ ಮೋದಿಯವರು ಅಲ್ಲಿನ ಪ್ರಧಾನಿ ಎಂಡಾ ಕೆನ್ನಿಯವರೊಂದಿಗೆ ಮಾತುಕತೆ ನಡೆಸುವರು ಎಂದು ಮೂಲಗಳು ತಿಳಿಸಿವೆ.
ಸುಮಾರು 60 ವರ್ಷಗಳ ಬಳಿಕ ಐರ್ಲೆಂಡ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
1956ರಲ್ಲಿ ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಐರ್ಲೆಂಡ್‌ಗೆ ಭೇಟಿ ನೀಡಿದ್ದರು.
ಐರ್ಲೆಂಡ್‌ನೊಂದಿಗೆ ಭಾರತವು ಸಂಬಂಧಗಳನ್ನು ವೃದ್ಧಿಸಲಿದೆ ಮತ್ತು ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ವಹಿವಾಟನ್ನೂ ಹೆಚ್ಚಿಸಲಾಗುವುದು ಎಂದು ಹೇಳಿಕೆಯೊಂದರಲ್ಲಿ ಮೋದಿ ತಿಳಿಸಿದ್ದಾರೆ.

ಐರ್ಲೆಂಡ್‌ನ ಕಂಪ್ಯೂಟರ್ ಉಪಕರಣಗಳು, ಸಾಫ್ಟ್ ವೇರ್, ಔಷಧಗಳು, ರಾಸಾಯನಿಕಗಳು, ಆಹಾರ ಪದಾರ್ಥಗಳು ಹಾಗೂ ಯಂತ್ರೋಪಕರಣಗಳು ಭಾರತಕ್ಕೆ ರಫ್ತಾಗುತ್ತಿವೆ. ಭಾರತವು ಬಟ್ಟೆ, ಔಷಧಗಳು ಹಾಗೂ ಎಂಜಿನಿಯರಿಂಗ್ ಉಪಕರಣಗಳನ್ನು ಐರ್ಲೆಂಡ್‌ಗೆ ರಫ್ತು ಮಾಡುತ್ತಿದೆ.
ಐರ್ಲೆಂಡ್‌ನಲ್ಲಿ ಸುಮಾರು 26 ಸಾವಿರ ಭಾರತೀಯ ಸಂಜಾತರು ನೆಲೆಸಿರುವುದಾಗಿ ವರದಿಗಳು ತಿಳಿಸಿವೆ.
ಐರ್ಲೆಂಡ್ ಭೇಟಿಯ ಬಳಿಕ ಮೋದಿಯವರು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸುವರು ಎಂದು ಮೂಲಗಳು ತಿಳಿಸಿವೆ.
ಮೋದಿಯವರು ವಾರ ಕಾಲದ ದ್ವಿರಾಷ್ಟ್ರ ಪ್ರವಾಸ ಕೈಗೊಂಡಿದ್ದು, ಆರ್ಥಿಕ ಸುಧಾರಣೆಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಲಾಗಿದೆ.
ಸ್ವಾತಂತ್ರಪೂರ್ವದಲ್ಲೂ ಭಾರತ ಹಾಗೂ ಐರ್ಲೆಂಡ್ ನಡುವೆ ಸಂಬಂಧಗಳು ಉತ್ತಮವಾಗಿದ್ದವು. 2013ರಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವಿನ ಸರಕು ಹಾಗೂ ಸೇವೆಗಳ ವಹಿವಾಟಿನ ವೌಲ್ಯ 2.48 ಶತಕೋಟಿ ಯೂರೊಗಳಿಗಿಂತಲೂ ಅಧಿಕವಾಗಿದೆ.
ಐರ್ಲೆಂಡ್‌ನಲ್ಲಿರುವ ಭಾರತೀಯ ಔಷಧೀಯ ಕಂಪೆನಿಗಳಲ್ಲಿ ವೊಕಾರ್ಟ್, ಸನ್ ಫಾರ್ಮಾ ಹಾಗೂ ರಿಲಯನ್ಸ್ ಜೆನಿಮೆಡಿಕ್ಸ್ ಪ್ರಮುಖವಾಗಿವೆ. ಫಸ್ಟ್ ಸೋರ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್), ಎಚ್‌ಸಿಎಲ್ ಹಾಗೂ ವಿಪ್ರೊ ಇಲ್ಲಿರುವ ಪ್ರಮುಖ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾಗಿವೆ.
ಸರಕಾರದ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಮೋದಿಯವರು ಡಬ್ಲಿನ್‌ನಲ್ಲಿರುವ ಹೋಟೆಲ್ ಡಬಲ್ ಟ್ರೀ ಹಿಲ್ಟನ್‌ನಲ್ಲಿ ಆಯೋಜಿಸಲಾಗಿರುವ ವಿಶೇಷ ಸಮಾರಂಭದಲ್ಲಿ ಪಾಲ್ಗೊಂಡು ಭಾರತೀಯ ಸಮುದಾಯದೊಂದಿಗೆ ವಿಚಾರವಿನಿಮಯ ನಡೆಸುವರು.
ಐರ್ಲೆಂಡ್‌ನಲ್ಲಿರುವ ಸುಮಾರು 26 ಸಾವಿರ ಮಂದಿ ಭಾರತೀಯ ಮೂಲದವರಲ್ಲಿ 17 ಸಾವಿರ ಮಂದಿ ಭಾರತದ ಪೌರತ್ವ ಪಡೆದವರಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಭಾರತೀಯರು ಇಲ್ಲಿನ ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಅಥವಾ ನರ್ಸ್‌ಗಳಾಗಿ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ದುಡಿಯುತ್ತಿದ್ದಾರೆ.
ಐರ್ಲೆಂಡ್ ಭೇಟಿ ಪೂರ್ಣಗೊಳಿಸಿದ ಕೂಡಲೇ ಮೋದಿಯವರು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಆಯೋಜಿಸಿರುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿ ಭಾರತೀಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಮೋದಿಯವರ ವಿದೇಶ ಪ್ರವಾಸವು ಸೆಪ್ಟಂಬರ್ 29ರಂದು ಮುಕ್ತಾಯಗೊಳ್ಳಲಿದೆ. ತನ್ನ ಪ್ರವಾಸದ ವೇಳೆ ಮೋದಿಯವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಪ್ರಧಾನ ಕಚೇರಿಗೂ ಭೇಟಿ ನೀಡಲಿದ್ದಾರೆ.
ಗುರುವಾರ ಜಾನ್‌ಎಫ್.ಕೆನಡಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಮೋದಿಯವರು ಬಳಿಕ ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯ 70ನೆ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಕ್ಯಾಲಿಫೋರ್ನಿಯದ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲಿರುವ ಅವರು ಪ್ರಮುಖ ವ್ಯಾಪಾರ ಹಾಗೂ ಬಂಡವಾಳ ನೆರವಿಗೆ ಸಂಬಂಧಿಸಿದ ವಿಷಯಗಳ ಬಗೆಗಿನ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Write A Comment