ಬರ್ಲಿನ್, ಸೆ.23: ರಾಷ್ಟ್ರದ ಅತಿದೊಡ್ಡ ಕಾರು ಉತ್ಪಾದಕ ಕಂಪೆನಿಯು ವಿಶ್ವದಾದ್ಯಂತ ಮಾರಾಟ ಮಾಡಿರುವ ಕಾರುಗಳ ಹೊಗೆಮಾಲಿನ್ಯ ತಪಾಸಣೆಯಲ್ಲಿ ವಂಚನೆಯ ಭಾರೀ ಹಗರಣ ನಡೆಸಿರುವ ಆರೋಪದ ಬಗ್ಗೆ ಜರ್ಮನಿ ತನಿಖೆಯೊಂದನ್ನು ಪ್ರಾರಂಭಿಸಿದೆ.
ಜರ್ಮನಿಯ ಮೋಟಾರು ವಾಹನ ತಯಾರಿಕಾ ದಿಗ್ಗಜ ಫೋಕ್ಸ್‌ವಾಗನ್ ವಿರುದ್ಧ ತನಿಖೆ ನಡೆಸಲು ಜರ್ಮನಿ ಸರಕಾರವು ತನಿಖಾ ಆಯೋಗವೊಂದನ್ನು ರಚಿಸಿದ್ದು, ಅದು ವೋಲ್ಫ್ಸ್‌ಬರ್ಗ್‌ನಲ್ಲಿರುವ ಕಂಪೆನಿಯ ಪ್ರಧಾನ ಕಾರ್ಯಾಲಯಕ್ಕೆ ಭೇಟಿ ನೀಡಲಿದೆ ಎಂದು ಜರ್ಮನಿಯ ಸಾರಿಗೆ ಸಚಿವ ಅಲೆಕ್ಸಾಂಡರ್ ಡಾಬ್ರಿಂಡ್ ಪ್ರಕಟಿಸಿದ್ದಾರೆ.
ಸಾರಿಗೆ ಸಚಿವಾಲಯದಲ್ಲಿರುವ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಓಡನ್‌ವಾಲ್ಡ್ ನೇತೃತ್ವದ ತನಿಖಾ ಆಯೋಗವು ಕಾರುಗಳ ಹೊಗೆಮಾಲಿನ್ಯ ತಪಾಸಣೆಯನ್ನು ಜರ್ಮನಿ ಹಾಗೂ ಯುರೋಪಿಯನ್ ಮಾರ್ಗಸೂಚಿಗಳನ್ವಯ ಹಾಗೂ ಜರ್ಮನಿಯ ತಾಂತ್ರಿಕ ತಪಾಸಣಾ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳನ್ವಯ ನಡೆಸಲಾಗಿದೆಯೇ ಎಂಬುದನ್ನು ಖಚಿತಪಡಿಸಲಿದೆ ಎಂದವರು ಹೇಳಿದ್ದಾರೆ.
ಜಗತ್ತಿನ ಎರಡನೆ ಅತಿದೊಡ್ಡ ಮೋಟಾರುವಾಹನ ತಯಾರಿಕಾ ಸಂಸ್ಥೆ ಫೋಕ್ಸ್‌ವಾಗನ್ ವಿರುದ್ಧ ಮೊದಲ ಬಾರಿಗೆ ಅಮೆರಿಕದ ಪರಿಸರ ರಕ್ಷಣಾ ಸಂಸ್ಥೆ(ಇಪಿಎ) ಆಕ್ಷೇಪ ವ್ಯಕ್ತಪಡಿಸಿತ್ತು.
ಸಾಮಾನ್ಯ ಬಳಕೆಯಲ್ಲಿ ವಾಸ್ತವಕ್ಕಿಂತಲೂ ಕಡಿಮೆ ಹೊಗೆಯುಗುಳುವಿಕೆ ಪ್ರಮಾಣವನ್ನು ತೋರಿಸುವ ಸಾಧನವನ್ನು ಅಳವಡಿಸಲಾಗಿರುವ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಕಾರುಗಳನ್ನು ಹಿಂಪಡೆಯುವಂತೆ ಕಳೆದ ವಾರ ಇಪಿಎ ಫೋಕ್ಸ್‌ವಾಗನ್‌ಗೆ ಆದೇಶ ನೀಡಿತ್ತು.
ವಿಶೇಷ ತಂತ್ರಜ್ಞಾನದ ಅಳವಡಿಕೆಯು ಕಾರುಗಳನ್ನು ಹೊಗೆಯುಗುಳುವಿಕೆ ಪರೀಕ್ಷೆಗೆ ಒಳಪಡಿಸಿದಾಗ ವಾಸ್ತವಕ್ಕಿಂತಲೂ ಕಡಿಮೆ ಮಾಲಿನ್ಯ ಪ್ರಮಾಣವನ್ನು ತೋರಿಸುತ್ತದೆ ಎನ್ನಲಾಗಿದೆ. ಈ ವಂಚನೆಯಿಂದಾಗಿ ಫೋಕ್ಸ್‌ವಾಗನ್ ಕಂಪೆನಿಯ ಕಾರುಗಳು ಅಮೆರಿಕದಲ್ಲಿ ಕಾನೂನಿನಡಿ ಅವಕಾಶವಿರುವುದಕ್ಕಿಂತಲೂ 40 ಪಟ್ಟು ಅಧಿಕ ಪ್ರಮಾಣದಲ್ಲಿ ಮಾಲಿನ್ಯ ವಿಸರ್ಜನೆ ಮಾಡುತ್ತಿವೆ ಎಂದು ಇಲ್ಲಿನ ಪರಿಸರ ರಕ್ಷಣಾ ಸಂಸ್ಥೆ ಹೇಳಿದೆ.
ಇಪಿಎ ಜೊತೆಗೆ ಅಮೆರಿಕದ ನ್ಯಾಯಾಂಗ ಇಲಾಖೆ ಹಾಗೂ ಕೆನಡಾದ ಪರಿಸರ ಪ್ರಾಧಿಕಾರಗಳು ಕೂಡಾ ಫೋಕ್ಸ್‌ವಾಗನ್ ಡೀಸೆಲ್ ಕಾರುಗಳಲ್ಲಿ ಹೊಗೆಯುಗುಳುವಿಕೆ ಪರೀಕ್ಷೆಗೆ ಸಂಬಂಧಿಸಿ ಎಸಗಿರುವ ವಂಚನೆಯ ಬಗ್ಗೆ ತನಿಖೆಗೆ ಮುಂದಾಗಿವೆ.
ಈ ಹಗರಣವು ರಾಷ್ಟ್ರದ ‘ಮೇಡ್ ಇನ್ ಜರ್ಮನಿ’ ಬ್ರಾಂಡ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗುಣಮಟ್ಟದ ಉತ್ಪನ್ನಗಳಿಗೆ ಸಂಬಂಧಿಸಿದ ಜಾಗತಿಕ ಹೆಗ್ಗಳಿಕೆಗೆ ತೀವ್ರ ಹಾನಿಯುಂಟು ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜರ್ಮನಿ ಸಮಗ್ರ ತನಿಖೆಗೆ ಮುಂದಾಗಿದೆ.
ಈ ಹಗರಣದಿಂದಾಗಿ ಫ್ರಾಂಕ್‌ಫರ್ಟ್ ಶೇರು ವಿನಿಮಯ ಕೇಂದ್ರದಲ್ಲಿ ಫೋಕ್ಸ್ ವಾಗನ್ ಸೋಮವಾರ ತನ್ನ ಶೇರುಗಳಲ್ಲಿ ಶೇಕಡಾ 16 ಕುಸಿತ ಕಂಡಿದ್ದು, ಮಂಗಳವಾರದ ವೇಳೆಗೆ ಶೇಕಡಾ 20 ನಷ್ಟ ಅನುಭವಿಸಿದೆ. ಅಮೆರಿಕದಲ್ಲಿರುವ ಸುಮಾರು 4,82,000 ಕಾರುಗಳನ್ನು ಹಿಂಪಡೆಯುವಂತೆ ಫೋಕ್ಸ್‌ವಾಗನ್‌ಗೆ ಅಮೆರಿಕದ ಪರಿಸರ ರಕ್ಷಣಾ ಸಂಸ್ಥೆ ಆದೇಶಿಸಿದೆ. ಈ ಕಾರುಗಳಲ್ಲಿ ವಿಡಬ್ಲು ಜೆಟ್ಟಾ, ಬೀಟಲ್, ಗೋಲ್ಫ್, ಪಸಾತ್ ಹಾಗೂ ಆಡಿ ಎ3 ಮಾದರಿಗಳು ಒಳಗೊಂಡಿವೆ. ಜಗತ್ತಿನಾದ್ಯಂತ ಮಾರಾಟ ಮಾಡಲಾಗಿರುವ ಸುಮಾರು 11 ದಶಲಕ್ಷ ಕಾರುಗಳಿಗೆ ಹೊಗೆ ಮಾಲಿನ್ಯ ನಿಯಂತ್ರಣ ಪರೀಕ್ಷೆಗಳಲ್ಲಿ ವಂಚನೆಯೆಸಗುವ ಸಾಧನಗಳನ್ನು ಅಳವಡಿಸಲಾಗಿದೆ ಎಂದು ಇದೇ ವೇಳೆ ಫೋಕ್ಸ್‌ವಾಗನ್ ಒಪ್ಪಿಕೊಂಡಿದೆ ಎನ್ನಲಾಗಿದೆ.