ಬೆಂಗಳೂರು, ಸೆ.22: ಚೀನಾಕ್ಕೆ ಕಳ್ಳ ಸಾಗಣೆ ಮಾಡಲು ಸಂಗ್ರಹಿಸಿದ್ದ 30 ಲಕ್ಷ ರೂ. ಮೌಲ್ಯದ 1010 ಕೆ.ಜಿ ರಕ್ತ ಚಂದನ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಮಾತ್ರ ಬೆಳೆಯುವ ರಕ್ತ ಚಂದನ ಮರವು ವಿದೇಶಗಳಲ್ಲಿ ಭಾರೀ ಬೇಡಿಕೆ ಹೊಂದಿದ್ದು , ಚೀನಾದಲ್ಲಿ ವಿಶೇಷ ಔಷಧ ತಯಾರಿಸಲು ಅತ್ಯಂತ ಬೆಲೆ ಬಾಳುವ ಪೀಠೋಪಕರಣಗಳು, ಅಲಂಕಾರ ವಸ್ತುಗಳು ಹಾಗೂ ಸಂಗೀತ ವಾದ್ಯಗಳನ್ನು ತಯಾರಿಸಲು ರಕ್ತಚಂದನ ಮರದ ತುಂಡು ಬಳಸುತ್ತಾರೆ.
ಬೆಂಗಳೂರಿನಿಂದ ಚೆನ್ನೈ, ಮುಂಬೈ ಮೂಲಕ ಚೀನಾ ದೇಶಕ್ಕೆ ಕಳ್ಳಸಾಗಣೆ ಮಾಡಲು ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ವಾಸಿ ನಾಸೀರ್ ಎಂಬಾತ ರಕ್ತಚಂದನವನ್ನು ಸಂಗ್ರಹಿಸಿಟ್ಟಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ. ವರ್ತೂರು, ಗುಂಜೂರು ಗ್ರಾಮದ ಬಳಿಯಿರುವ ಕಿಸ್ಟಿಯಾ ಇಂಟರ್‌ನ್ಯಾಷನಲ್ ಶಾಲೆ ಹಿಂಭಾಗದ ನೀಲಗಿರಿ ತೋಪಿನಲ್ಲಿ ರಕ್ತಚಂದನ ಸಂಗ್ರಹಿಸಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ನೀಲಗಿರಿ ತೋಪಿನ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ರಕ್ತಚಂದನ ಸಂಗ್ರಹಿಸಿದ್ದ ಆರೋಪಿ ನಾಸೀರ್ ತಲೆಮರೆಸಿಕೊಂಡಿದ್ದು , ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ.
