ಕರ್ನಾಟಕ

ಸರಗಳ್ಳರ ಹಾವಳಿ ತಡೆಯಿರಿ : ಪೊಲೀಸರಿಗೆ ಜಾರ್ಜ್ ಕಟ್ಟುನಿಟ್ಟಿನ ಆದೇಶ

Pinterest LinkedIn Tumblr

george_pregnant_women_polise

ಬೆಂಗಳೂರು, ಸೆ.22: ನಗರದಲ್ಲಿ ಹೆಚ್ಚಾಗಿರುವ ಸರಗಳ್ಳರ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಬಂಧೀಖಾನೆ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಜತೆ ಇಂದು ಸಭೈ ನಡೆಸಿದ ಸಚಿವರು, ಹಾಡಹಗಲೆ ಜನನಿಬಿಡ ಪ್ರದೇಶಗಳಲ್ಲೇ ಸರಗಳವು ನಡೆಯುತ್ತಿದ್ದು ಜನರು ಭಯದ ವಾತಾವರಣದಲ್ಲಿ ಇರುವಂತೆ ಮಾಡಿದೆ. ಇದನ್ನು ತಪ್ಪಿಸಿ ಎಂದು ತಿಳಿಸಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಬಕ್ರೀದ್ ಹಬ್ಬ, ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅಹಿತಕರ ಘಟನೆ ನಡೆಯದಂತೆ ಕೈಗೊಳ್ಳಬೇಕಾದ ಬಿಗಿಭದ್ರತೆ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ಕೈದಿಗಳ ಮಾರಾಮಾರಿ ನಡೆದು ಒಬ್ಬ ಸಾವನ್ನಪ್ಪಿದ ಘಟನೆ ಮರುಕಳಿಸದಂತೆ ಜೈಲಿನಲ್ಲಿ ಕೈಗೊಳ್ಳಬೇಕಾದ ಭದ್ರತಾವ್ಯವಸ್ಥೆ ಕುರಿತು ಬಂಧೀಖಾನೆ ಡಿಜಿಪಿ, ಎಸ್‌ಪಿ ಅವರೊಂದಿಗೆ ಚರ್ಚಿಸಿದರೆಂದು ಮೂಲಗಳು ತಿಳಿಸಿವೆ. ನಗರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದರೆಂದು ತಿಳಿದುಬಂದಿದೆ.

ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳ ತಡೆಗೂ ತುರ್ತುಕ್ರಮ ಕೈಗೊಳ್ಳುವ ಕುರಿತು ಸಭೈಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುವ ಪ್ರದೇಶಗಳಲ್ಲಿ ಗಸ್ತನ್ನು ಹೆಚ್ಚಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸೂಚಿಸಿದರೆಂದು ತಿಳಿದುಬಂದಿದೆ. ಸಭೈಯಲ್ಲಿ ಬಂಧೀಖಾನೆ ಡಿಜಿಪಿ, ಎಸ್‌ಪಿ, ನಗರ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Write A Comment