ಕರ್ನಾಟಕ

ರಾಯಚೂರಿನಲ್ಲೇ ಐಐಟಿ ಸ್ಥಾಪಿಸಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

Pinterest LinkedIn Tumblr

IIT-Raichurಬೆಂಗಳೂರು: ರಾಜ್ಯಕ್ಕೆ ಮಂಜೂರಾಗಿರುವ ಐಐಟಿಯನ್ನು ರಾಯಚೂರಿನಲ್ಲಿಯೇ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸೆಪ್ಟೆಂಬರ್ 16ರಂದೇ ಸಿದ್ದರಾಮಯ್ಯ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರವನ್ನು ಬರೆದಿದ್ದು, ರಾಯಚೂರಿನಲ್ಲೇ ಐಐಟಿ ಸ್ಥಾಪಿಸುವುದಾದರೆ  ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಹುಬ್ಬಳ್ಳಿ-ಧಾರವಾಡದಲ್ಲಿ ಈಗಾಗಲೇ ಇಂಟರ್‌ನ್ಯಾಷನಲ್ ಇನ್‌ಫರ್ಮೇಷನ್ ಟೆಕ್ನಾಲಜಿ ಇನ್‌ಸ್ಟಿಟ್ಯೂಷನ್ (ಐಐಟಿಐ)  ಸ್ಥಾಪಿಸಲಾಗಿದೆ. ಕಳೆದ ವರ್ಷವೇ ಇದು ಆರಂಭವಾಗಿದೆ. ಹೀಗಾಗಿ ಹುಬ್ಬಳ್ಳಿಯ ಬದಲು ರಾಯಚೂರಿನಲ್ಲಿ ಐಐಟಿ ಸ್ಥಾಪಿಸಿದರೆ ಪ್ರಾದೇಶಿಕ ಅಸಮತೋಲನ ಸರಿದೂಗಿಸಲು ನೆರವಾಗುತ್ತದೆ  ಎಂದು ವಿವರಿಸಿದ್ದಾರೆ.

ಪತ್ರದಲ್ಲಿ ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ರಾಯಚೂರಿಗೆ ಐಐಟಿ ಮಂಜೂರು ಮಾಡುವುದು ವೈಜ್ಞಾನಿಕ ನಿರ್ಧಾರ. ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವುದಾದರೆ ಕಾಲಮಿತಿಯಲ್ಲಿ  ಭೂಮಿ, ನೀರು ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಬರೆದಿರುವ ಪತ್ರದ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಐಐಟಿ  ರಾಜಕೀಯ ತೀವ್ರಗೊಂಡಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಅಧ್ಯಯನ ನಡೆಸಿ ವರದಿ ನೀಡಿದ ಎಂಟು ದಿನಗಳಲ್ಲೇ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಷಿ, ಅನಂತ್‌ಕುಮಾರ್,  ಜಗದೀಶ್ ಶೆಟ್ಟರ್, ಸದಾನಂದಗೌಡ ಕೇಂದ್ರ ಸರ್ಕಾರದ  ಮೇಲೆ ಒತ್ತಡ ಹೇರಿ ಹುಬ್ಬಳ್ಳಿಗೆ ಐಐಟಿ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದಕ್ಕೆ ಸಡ್ಡು ಹೊಡೆಯಲು  ಮುಂದಾಗಿರುವ ರಾಜ್ಯ ಸರ್ಕಾರ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಮತ್ತೆ ರಾಯಚೂರಿನಲ್ಲೇ ಐಐಟಿ  ಸ್ಥಾಪಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಸಂವಿಧಾನ ತಿದ್ದುಪಡಿ ಆಗಿ 371(ಜೆ) ಅಡಿ ಉದ್ಯೋಗ, ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಸಿಕ್ಕಿದೆ. ಹೀಗಾಗಿ ಹೈದರಾಬಾದ್-ಕರ್ನಾಟಕ  ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಹೆಚ್ಚಿಸಿದೆ. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷದ ಲೋಕಸಭೆಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ  ಹೇರಿದ್ದರು. ಧಾರವಾಡದ ಬದಲಾಗಿ ರಾಯಚೂರಿನಲ್ಲಿಯೇ ಐಐಟಿ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಸಲಹೆ ನೀಡಿದ್ದರು.

Write A Comment