ಕರ್ನಾಟಕ

ಶ್ರೀರಾಮ ಸೇನೆಯಿಂದ ಚೆನ್ನವೀರ ಕಣವಿ, ಡಾ.ಗಿರಡ್ಡಿ ಗೋವಿಂದ ರಾಜ್ ಮತ್ತು ತೋಂಟದಾರ್ಯ ಶ್ರೀಗಳಿಗೆ ಬೆದರಿಕೆ..!

Pinterest LinkedIn Tumblr

threat-to-kannada-writersಬೆಂಗಳೂರು: ಹಿರಿಯ ಸಾಹಿತಿ ಮತ್ತು ವಿಚಾರವಾದಿ ಡಾ.ಎಂಎಂ ಕಲಬುರ್ಗಿ ಹತ್ಯೆಯ ಕರಿ ನೆರಳಿನಲ್ಲೇ ಮತ್ತೆ ಮೂವರು ಕರ್ನಾಟಕದ ವಿಚಾರವಾದಿಗಳಿಗೆ ಬೆದರಿಕೆ ಬಂದಿದೆ ಎಂದು  ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಶ್ರೀರಾಮ ಸೇನೆಗೆ ಸೇರಿದ ಮುಖಂಡರು ಈ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದ್ದು, ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ, ಡಾ.ಗಿರಡ್ಡಿ ಗೋವಿಂದ ರಾಜ್  ಮತ್ತು ತೋಂಟದಾರ್ಯ ಶ್ರೀಗಳಿಗೆ ಬೆದರಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರಕರಣ ಸಂಬಂಧ ಶ್ರೀರಾಮ ಸೇನೆಯ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ  ಬಾವಿ ಎಂಬುವವರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ವಿಚಾರವಾದಿ ಮತ್ತು ಹಿರಿಯ ಸಂಶೋಧಕ ಡಾ. ಎಂಎಂ ಕಲಬುರ್ಗಿ ಅವರ ಹತ್ಯಾ ಪ್ರಕರಣದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಪಾತ್ರವಿದೆ ಎಂದು ಆರೋಪಿಸಿ ಹಿರಿಯ  ಸಾಹಿತಿಗಳಾದ ಚನ್ನವೀರ ಕಣವಿ, ಡಾ. ಗಿರಡ್ಡಿ ಗೋವಿಂದರಾಜ, ತೊಂಟದಾರ್ಯ ಸ್ವಾಮಿಗಳ ನೇತೃತ್ವದ ಸಾಹಿತಿಗಳ ತಂಡ ಧಾರವಾಡ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರು.

ಈ ಆರೋಪವನ್ನು ತಳ್ಳಿಹಾಕಿದ್ದ ರಾಯಚೂರು ಶ್ರೀರಾಮ ಸೇನೆ ಘಟಕ ಕೂಡಲೇ ಸಾಕ್ಷಿ ಒದಗಿಸಬೇಕು, ಇಲ್ಲವಾದಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು. ಅಷ್ಟೇ ಅಲ್ಲದೇ ಒಂದು ತಿಂಗಳೊಳಗೆ ಕ್ಷಮೆಯಾಚಿಸದಿದ್ದರೆ ಚನ್ನವೀರ ಕಣವಿ ಹಾಗೂ ಗಿರಡ್ಡಿ ಗೋವಿಂದರಾಜ ನಿವಾಸಗಳನ್ನು ಧ್ವಂಸ ಮಾಡುವುದಾಗಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಬಾವಿ ಹೇಳಿಕೆ ನೀಡಿದ್ದರು. ಈ ಬೆದರಿಕೆಯ ಆರೋಪದಡಿಯಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಬಾವಿಯನ್ನು ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬೆದರಿಕೆ  ಹಿನ್ನೆಲೆ ಧಾರವಾಡದಲ್ಲಿ ಸಾಹಿತಿಗಳಿಬ್ಬರ ನಿವಾಸಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

Write A Comment