ಕರ್ನಾಟಕ

ಕೊಲೆಗಡುಕರನ್ನು ಬಂಧಿಸಿ…ಇಲ್ಲವೇ ನಮಗೆ ದಯಾಮರಣ ನೀಡಿ: ಜನತಾದರ್ಶನದಲ್ಲಿ ಮುಖ್ಯಮಂತ್ರಿ ಮುಂದೆ ಅಳಲುತೋಡಿಕೊಂಡ ಕುಟುಂಬ

Pinterest LinkedIn Tumblr

janatha dar

ಬೆಂಗಳೂರು: ‘ಅಣ್ಣನ ಕೊಲೆ ಮಾಡಿದವರನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ, ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ’ – ಒಂದು ವರ್ಷದಿಂದ ನ್ಯಾಯಕ್ಕಾಗಿ ಅಲೆದಾಡಿ ಬೇಸತ್ತ ಶಿರಾ ತಾಲ್ಲೂಕಿನ ಕುಟುಂಬವೊಂದು ಮಂಗಳವಾರ ಜನತಾದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಡಿದ ಮನವಿ ಇದು.

ತಾಲ್ಲೂಕಿನ ಬುಕ್ಕಾಪಟ್ಟಣ ಹೋಬ ಳಿಯ ಯರದಗಟ್ಟೆ ಗ್ರಾಮದ ಭೂತೇಶ್‌ ಎಂಬುವವರ ಕುಟುಂಬದ ಸದಸ್ಯರು ಮಾಡಿದ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೊತೆ ಮಾತನಾಡಿ ನ್ಯಾಯಕೊಡಿಸುವ ಭರವಸೆ ನೀಡಿದರು.

ಟಿ.ಬಿ. ಜಯಚಂದ್ರ ಬೆಂಬಲಿಗನಿಂದ ಆರೋಪಿಗಳ ರಕ್ಷಣೆ: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರ ಹಿಂಬಾಲಕ ಶೇಷನಾಯಕ್‌ ಎಂಬವರು ಆರೋಪಿಗಳಿಗೆ ರಕ್ಷಣೆ ನೀಡುತಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೂತೇಶ್‌ ‘ನನ್ನ ಅಣ್ಣ ರಮೇಶನನ್ನು ವರ್ಷದ ಹಿಂದೆ ಹಂದಿ ಬೇಟೆಯ ನೆಪದಲ್ಲಿ ಕೊಲೆ ಮಾಡಲಾಗಿದೆ. ನಮ್ಮದು ಬಡ ಕುಟುಂಬ. ಅಣ್ಣನಿಗೆ ಐದು ಹೆಣ್ಣು ಮಕ್ಕಳು. ಅವರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹತ್ಯೆ ನಡೆದು ಒಂದು ವರ್ಷ ಕಳೆದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ’ ಎಂದು ದೂರಿದರು.

‘ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಹಲವು ಬಾರಿ ಭೇಟಿ ಮಾಡಿದರೂ ನನಗೆ ನ್ಯಾಯ ಸಿಕ್ಕಿಲ್ಲ’ ಎಂದು ಅಳಲು ತೋಡಿ ಕೊಂಡರು.

ಶಾಸಕರಿಂದ ಧಮಕಿ –ದೂರು: ಜಮೀನು ವಿಚಾರವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್‌ ಗೌಡ ಧಮಕಿ ಹಾಕುತ್ತಿದ್ದಾರೆ ಎಂದು ಸೈಯದ್ ರಹೀಂ ಎಂಬುವವರು ಸಿದ್ದರಾಮಯ್ಯ ಅವರಿಗೆ ದೂರು ನೀಡಿದರು.

‘ಕುಣಿಗಲ್‌ ತಾಲ್ಲೂಕು ಉತ್ತರಿ ದುರ್ಗದಲ್ಲಿ ಸುರೇಶ್‌ ಗೌಡ ಅವರು 30 ಗುಂಟೆ ಜಮೀನನ್ನು ಕಬಳಿಸಿದ್ದಾರೆ. ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ರಹೀಂ ಸುದ್ದಿಗಾರರಿಗೆ ತಿಳಿಸಿದರು.

ಕಾಯಂ ಕೆಲಸ ಕೊಡಿಸಿ: ಸಾಲಬಾಧೆ ತಾಳಲಾರದೆ ಜೂನ್‌ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮಂಡ್ಯದ ರೈತ ಡಿ.ಎಲ್‌. ನಿಂಗೇಗೌಡ ಪುತ್ರ ಯೋಗೇಶ್‌ ಎಂಬುವವರು ಪರಿಹಾರಕ್ಕೆ ಮತ್ತು ಕಾಯಂ ನೌಕರಿಗೆ ಮನವಿ ಮಾಡು ವುದಕ್ಕಾಗಿ ಜನತಾ ದರ್ಶನಕ್ಕೆ ಬಂದಿದ್ದರು.

ಪೋಲಿಯೊ ಪೀಡಿತ ಯೋಗೇಶ್‌ ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

‘ತಂದೆ ಎಸ್‌ಬಿಎಂನಲ್ಲಿ ₹1.5 ಲಕ್ಷ ಸಾಲ ಮಾಡಿದ್ದರು. ಸಾಲ ಮರು ಪಾವತಿಗಾಗಿ ಬ್ಯಾಂಕ್‌ ನೋಟಿಸ್‌ ನೀಡಿತ್ತು. ಕೈಸಾಲ ಸೇರಿ ಒಟ್ಟು ₹3.5 ಲಕ್ಷ ಸಾಲ ಇತ್ತು. ಜುಲೈ 17ರಂದು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳಾಗಲೀ ಯಾರೂ ನಮ್ಮ ಮನೆಗೆ ಭೇಟಿ ನೀಡಿಲ್ಲ. ಪರಿಹಾರ ನೀಡುವಂತೆ ಮನವಿ ಮಾಡಲು ಜನತಾದರ್ಶನಕ್ಕೆ ಬಂದಿದ್ದೇನೆ’ ಎಂದು ಯೋಗೇಶ್‌ ಹೇಳಿದರು.

ನ್ಯಾಯಬೇಕು: ವೈಟ್‌ಫೀಲ್ಡ್‌ ನಿವಾಸಿ ನರಸಿಂಹಸ್ವಾಮಿ ಎಂಬುವವರು ತಮ್ಮ ಮಗಳ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಿ ನ್ಯಾಯ ಕೊಡಿಸುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ, ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಸರ್ಕಾರಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳು ಏಪ್ರಿಲ್‌ 6ರಂದು ನಾಪತ್ತೆಯಾಗಿದ್ದಳು. ಮೂರು ದಿನಗಳ ನಂತರ, ಏಪ್ರಿಲ್‌ 9ರಂದು ನೀರಿನ ಟ್ಯಾಂಕ್‌ ಒಂದರಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಕೆಯನ್ನು ಕೊಲೆ ಮಾಡಲಾಗಿದೆ. ಶಾಲಾ ಶಿಕ್ಷಕಿಯೊಬ್ಬರ ಮೇಲೆ ನಮಗೆ ಸಂಶಯ ಇದೆ. ಆದರೆ, ಪೊಲೀಸರು ಇದುವರೆಗೆ ಏನೂ ಕ್ರಮ ಕೈಗೊಂಡಿಲ್ಲ’ ಎಂದು ಬಾಲಕಿ ತಂದೆ ಸುದ್ದಿಗಾರರಿಗೆ ತಿಳಿಸಿದರು.

785 ಅರ್ಜಿಗಳು
ಮಂಗಳವಾರ ನಡೆದ ಜನತಾ ದರ್ಶನದಲ್ಲಿ 785 ಅರ್ಜಿಗಳನ್ನು ಸಿದ್ದರಾಮಯ್ಯ ಸ್ವೀಕರಿಸಿದರು.

ಬೆಳಿಗ್ಗೆ 10.30ಕ್ಕೆ ಆರಂಭ ಗೊಂಡ ಜನತಾದರ್ಶನ ಮಧ್ಯಾಹ್ನ 1.45ರವರೆಗೆ ನಡೆಯಿತು.

ಬಾರದ ಜನ: 11 ತಿಂಗಳ (ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದಿತ್ತು) ನಂತರ ಜನತಾದರ್ಶನ ನಡೆದಿ ದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿಲ್ಲ.

ವಿಸ್ತರಣೆ, ಪುನರ್‌ರಚನೆ ಎರಡೂ…
ಶೀಘ್ರದಲ್ಲಿ ಸಂಪುಟ ವಿಸ್ತರಣೆ ಮತ್ತು ಪುನರ್‌ರಚನೆ ಮಾಡಲಾ ಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆಯೇ ಅಥವಾ ಪುನರ್‌ರಚನೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ‘ಎರಡೂ ಮಾಡುತ್ತೇವೆ’ ಎಂದರು.

Write A Comment