ಕರ್ನಾಟಕ

ತಿಂಗಳಾಂತ್ಯಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ನಿವೃತ್ತಿ

Pinterest LinkedIn Tumblr

ಕೊಉಸಹಿಕಬೆಂಗಳೂರು, ಸೆ.14-ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿದ್ದು, ಹೊಸ ಮುಖ್ಯ ಕಾರ್ಯದರ್ಶಿ ಯಾರಾಗಲಿದ್ದಾರೆ ಎಂಬ ಕುತೂಹಲ ತೀವ್ರಗೊಂಡಿದೆ. ಕಳೆದ ಬಾರಿ ಕೂಡ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹೆಸರು ಪ್ರಸ್ತಾಪವಾಗಿ ಕೊನೆ ಘಳಿಗೆಯಲ್ಲಿ ಕೈ ತಪ್ಪಿದ್ದ ರಾಜ್ಯಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್ ಅವರ ಹೆಸರು ಕೂಡ ಈ ಬಾರಿ ಮತ್ತೆ ಚಲಾವಣೆಗೆ ಬಂದಿದೆ.
ಈ ಬಾರಿಯೂ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ಉಮೇಶ್ ಅವರು ವಂಚಿತರಾದರೆ, ಸುಮಾರು ಒಂದೂವರೆ ದಶಕಗಳ ಕಾಲ ಕನ್ನಡಿಗರೊಬ್ಬರಿಗೆ ಮುಖ್ಯ ಕಾರ್ಯದರ್ಶಿಯಾಗುವ ಅವಕಾಶವೇ ದೊರೆಯುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.  ಮುಖ್ಯಕಾರ್ಯದರ್ಶಿಯಾಗುವ ಅರ್ಹರ ಸಾಲಿನಲ್ಲಿ ಕನ್ನಡೇತರರೇ ಹೆಚ್ಚಾಗಿದ್ದಾರೆ. ಮತ್ತೆ ಕನ್ನಡಿಗರಿಗೆ ಅವಕಾಶ ಸಿಗಲು ಸುಮಾರು 16 ವರ್ಷಗಳ ಕಾಲ ಕಾಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಕಾರ್ಯದರ್ಶಿಯಾಗುವ   21ಕ್ಕೂ ಹೆಚ್ಚು ಅರ್ಹರ ಐಎಎಸ್ ಅಧಿಕಾರಿಗಳ ಪೈಕಿ ಏಕೈಕ ಕನ್ನಡಿಗರೆಂದರೆ ಉಮೇಶ್ ಮಾತ್ರ. ಉಳಿದವರೆಲ್ಲ ಕನ್ನಡೇತರರು.

ರಾಜ್ಯದಲ್ಲಿ ಆವರಿಸಿರುವ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಾಲಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿಯವರನ್ನು ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಅಂದರೆ ಡಿಸೆಂಬರ್ ಅಂತ್ಯದವರೆಗೂ ಕೌಶಿಕ್ ಮುಖರ್ಜಿಯವರನ್ನೇ ಮುಂದುವರೆಸುವ ಉದ್ದೇಶ ಹೊಂದಲಾಗಿದೆ. ಸಂಪುಟ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಕೆ.ರತ್ನಪ್ರಭಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಕೇಂದ್ರ ಸೇವೆಯಲ್ಲಿರುವ ಉಪೇಂದ್ರ ತ್ರಿಪಾಠಿ ಅವರು ಕೂಡ ರೇಸಿನಲ್ಲಿದ್ದು, ಇವರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಒಲವು ವ್ಯಕ್ತವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಸೇವಾ ಹಿರಿತನದಲ್ಲಿ ಮೊದಲಿಗರಾಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರೂ ಕೂಡ ರೇಸಿನಲ್ಲಿದ್ದಾರೆ.  ಸೇವಾ ಹಿರಿತನದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ  ಡಾ.ಅನೂಪ್ ಕೆ. ಪೂಜಾರಿ,  ಕೇಂದ್ರಸರ್ಕಾರ ಸೇವೆಯಲ್ಲಿರುವ ಡಾ.ಸುಭಾಷ್‌ಚಂದ್ರ ಕುಂಟಿಯಾ, ಲತಾ ಕೃಷ್ಣರಾವ್ ಸೇರಿದಂತೆ  21 ಮಂದಿ ಮುಖ್ಯ ಕಾರ್ಯದರ್ಶಿಯಾಗುವ ಅರ್ಹತೆ ಹೊಂದಿದ್ದಾರೆ.  ಮುಖ್ಯಕಾರ್ಯದರ್ಶಿ ಹುದ್ದೆಗೆ ಯಾರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಹೊರತು ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.  ಆದರೆ ಈ ತಿಂಗಳ ಕೊನೆ ವಾರದಲ್ಲಿ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

2013ರ ಅಕ್ಟೋಬರ್ 31ರಂದು ಮುಖ್ಯಕಾರ್ಯದರ್ಶಿ ಹುದ್ದೆಯಿಂದ ಎಸ್.ಪಿ.ರಂಗನಾಥ್ ನಿವೃತ್ತರಾಗಿದ್ದರು. ಆ ಬಳಿಕ ಕೌಶಿಕ್ ಮುಖರ್ಜಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

Write A Comment