ಕರ್ನಾಟಕ

ಕಳಸಾ ಬಂಡೂರಿ ನಾಲಾ ಯೋಜನೆಗಾಗಿ ಬೀದಿಗಿಳಿದ ಕನ್ನಡ ಚಿತ್ರರಂಗ ! ಹುಬ್ಬಳ್ಳಿಯಲ್ಲಿ ಬೃಹತ್ ಧರಣಿ; ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಂತಹ ತ್ಯಾಗಕ್ಕೂ ಸಿದ್ಧ ಎಂದ ಚಿತ್ರರಂಗ

Pinterest LinkedIn Tumblr

w

ಹುಬ್ಬಳ್ಳಿ, ಸೆ.13: ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಕಳೆದ 58 ದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ರೈತರು, ಸಾರ್ವಜನಿಕರು ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಬೆಂಬಲ ನೀಡಿದ್ದು , ಇಂದು ಹೋರಾಟದ ಭೂಮಿಕೆಗೆ ಇಳಿದಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಂತಹ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದೆ.

ಕನ್ನಡದ ಭಾಷೆಗೆ ಕುತ್ತು ಬಂದಾಗ 13-9-1980ರ ಭಾನುವಾರ ಇದೇ ದಿನ ಡಾ.ರಾಜ್‌ಕುಮಾರ್ ನೇತೃತ್ವದಲ್ಲಿ ಗೋಕಾಕ್ ಚಳವಳಿಯನ್ನು ಮಾಡಿ ಸರ್ಕಾರವನ್ನು ಎಚ್ಚರಿಸಿದ್ದ ಚಿತ್ರೋದ್ಯಮ ಇಂದು ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೀದಿಗಿಳಿದಿದೆ. ಡಾ.ರಾಜ್‌ಕುಮಾರ್ ಪುತ್ರ ಶಿವರಾಜ್‌ಕುಮಾರ್ ನೇತೃತ್ವದಲ್ಲಿ ಇಡೀ ಚಿತ್ರರಂಗ ಉತ್ತರ ಕರ್ನಾಟಕದಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ.

ಕಳೆದ 58 ದಿನಗಳಿಂದ ಇಲ್ಲಿನ ಜನ ಕುಡಿಯುವ ನೀರಿನ ಈ ಯೋಜನೆಗಾಗಿ ಹಗಲಿರುಳು ಹೋರಾಟ ಮಾಡುತ್ತಿದ್ದರು. ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದವು. ನಿನ್ನೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೋರಾಟದ ನಿರ್ಣಯವನ್ನು ಕೈಗೊಂಡು ಉತ್ತರ ಕರ್ನಾಟಕ ಭಾಗಕ್ಕೆ ಎಲ್ಲಾ ಚಲನಚಿತ್ರ ನಟ, ನಟಿಯರು ತೆರಳಿದರು. ಕಳಸಾ ಬಂಡೂರಿ ಯೋಜನೆ ಶೀಘ್ರ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಚಿತ್ರರಂಗ ಎಲ್ಲಾ ರೀತಿಯ ಬೆಂಬಲ ನೀಡಿದೆ. ಯೋಜನೆ ಜಾರಿಯಾಗುವವರೆಗೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಚಿತ್ರರಂಗದ ಗಣ್ಯರು ಭರವಸೆ ನೀಡಿದರು.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಗಣೇಶ್, ರಮೇಶ್, ಉಪೇಂದ್ರ, ರವಿಚಂದ್ರನ್, ಯಶ್, ದೊಡ್ಡಣ್ಣ , ಸಾ.ರಾ.ಗೋವಿಂದು, ರಾಕ್‌ಲೈನ್ ವೆಂಕಟೇಶ್, ಭಾರತಿ ವಿಷ್ಣುವರ್ಧನ್, ಬಿ.ಸರೋಜಾದೇವಿ, ಸಾಧು ಕೋಕಿಲ, ಬಾ.ಮಾ.ಹರೀಶ್, ಎಚ್.ಡಿ.ಗಂಗರಾಜು, ಮಾಲಾಶ್ರೀ, ಜೈ ಜಗದೀಶ್, ಪೂಜಾಗಾಂಧಿ, ಅನಿರುದ್ಧ್, ಸುಂದರರಾಜ್, ಪ್ರಮೀಳಾ ಜೋಷಾಯ್, ದುನಿಯಾ ವಿಜಯ್ ಸೇರಿದಂತೆ ಇಡೀ ಚಿತ್ರೋದ್ಯಮವೇ ಹೋರಾಟದಲ್ಲಿ ಪಾಲ್ಗೊಂಡಿತ್ತು. ಶಿವರಾಜ್‌ಕುಮಾರ್ ನೇತೃತ್ವದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ಚಿತ್ರದಂಡು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು.

ನಂತರ ನಗರದ ವಿವಿಧ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದ ಚಿತ್ರೋದ್ಯಮದವರು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್ ಅವರು, ಕಳಸಾ ಬಂಡೂರಿ ಯೋಜನೆ ಉತ್ತರ ಕರ್ನಾಟಕ ಜನತೆಯ ಬಹು ದಿನಗಳ ಬೇಡಿಕೆ. ನಾವು ನಿಮ್ಮ ಭಾವನೆ ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಬೆಂಬಲ ಸದಾ ನಿಮಗೆ ಇರುತ್ತದೆ. ಮುಂದೆ ಯಾವುದೇ ಹೋರಾಟಕ್ಕೆ ಕರೆದರೂ ನಾವು ಬರಲು ಸಿದ್ಧ ಎಂದು ಘೋಷಿಸಿದರು. ಕುಡಿಯುವ ನೀರಿನ ಯೋಜನೆ ಜಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀನಾಮೇಷ ಎಣಿಸದಂತೆ ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನಟ ಉಪೇಂದ್ರ ಮಾತನಾಡಿ, ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಆಗಿರುವ ಅದ್ವಾನವೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಕೂಡಲೇ ಸರ್ಕಾರ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕುಡಿಯುವ ನೀರಿನ ಈ ಯೋಜನೆಗೆ ಗೋವಾ ಸರ್ಕಾರ ರಾಜಕೀಯ ಮಾಡುತ್ತಿರುವುದು ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ಉಗ್ರ ಸ್ವರೂಪ ತಾಳಲಿದೆ ಎಂದು ಹೇಳಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ಮಾತನಾಡಿ, ನಾಡಿನ ಜನರಿಂದ ಚಲನಚಿತ್ರೋದ್ಯಮ ಉಳಿದಿದೆ. ಜನರ ಸಮಸ್ಯೆಗಾಗಿ ಸದಾ ನಾವು ನಿಮ್ಮೊಂದಿಗೆ ಇರುತ್ತೇವೆ. ಉತ್ತರ ಕರ್ನಾಟಕದ ಭಾಗದ ಜನರ ಸಮಸ್ಯೆಗೆ ನಾವು ಸ್ಪಂದಿಸುವುದಿಲ್ಲ ಎಂಬ ಅನುಮಾನ ಬೇಡ. ಈ ಭಾಗದ ಜನರ ಸಮಸ್ಯೆಗಳಿಗೆ ಸರ್ಕಾರಗಳು ತಾರತಮ್ಯ ಮಾಡುವುದು ಬೇಡ ಎಂದು ಅವರು ಹೇಳಿದರು. ಒಂದೇ ಬಾರಿಗೆ ನೂರಾರು ಕಲಾವಿದರು ಉತ್ತರ ಕರ್ನಾಟಕ ಭಾಗಕ್ಕೆ ಆಗಮಿಸಿದ್ದರಿಂದ ನಟ-ನಟಿಯರನ್ನು ನೋಡಲು ಜನರ ನೂಕು ನುಗ್ಗಲು ಹೆಚ್ಚಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಪಕ್ಷಾತೀತ ಹೋರಾಟ ಅಗತ್ಯ: ಚಿತ್ರನಟಿ ಶೃತಿ
ಹುಬ್ಬಳ್ಳಿ: ಪಕ್ಷಬೇಧ ಭಾವ ಮರೆತು ಎಲ್ಲ ಪಕ್ಷದವರು ಒಂದಾಗಿ ಹೋರಾಟ ಮಾಡಿದಾಗ ಮಾತ್ರ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಸಾಧ್ಯ ಎಂದು ಚಿತ್ರನಟಿ ಶೃತಿ ತಿಳಿಸಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಕಳೆದ ಹಲವಾರು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಚಿತ್ರರಂಗದ ಸಂಪೂರ್ಣ ಬೆಂಬಲವಿದೆ ಎಂದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುವ ನಿಟ್ಟಿನಲ್ಲಿ ಇಡೀ ಚಿತ್ರರಂಗವೇ ರೈತರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂದರು.

ಗೋವಾ ರಾಜ್ಯದ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ನೀರಿನ ಹಾಗೂ ರೈತರ ವಿಷಯದಲ್ಲಿ ರಾಜಕೀಯ ಸಲ್ಲದು ಎಂದರು.

ಉತ್ತರ ಕರ್ನಾಟಕದ ರೈತರು ಭೀಕರ ಬರಗಾಲದಿಂದ ತತ್ತರಿಸಿದ್ದಾರೆ. ಕಳಸಾ ಬಂಡೂರಿ ಯೋಜನೆಯಿಂದ ಬೆಳಗಾವಿ, ಧಾರವಾಡ, ಬಾಗಲಕೋಟೆ ರೈತರು ನೀರಾವರಿ ಯೋಜನೆಗೆ ಇದರಿಂದ ಅನುಕೂಲವಾಗುತ್ತದೆ. ಮಹದಾಯಿ ನದಿ ನೀರಿನ ಯೋಜನೆಗೆ ಇದರಿಂದ ಅನುಕೂಲವಾಗುತ್ತದೆ. ಈ ಭಾಗದ ರೈತರ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಯೋಜನೆ ಅನುಷ್ಠಾನವಾಗುವವರೆಗೂ ಇಡೀ ಚಿತ್ರರಂಗ ಹೋರಾಟಕ್ಕೆ ಬೆಂಬಲಿಸುವುದು ಎಂದರಲ್ಲದೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು.

ಬಿ.ಸರೋಜಾದೇವಿ: ರೈತರು ಸಂಕಷ್ಟದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿ ನಾಲಾ ಯೋಜನೆ ಶೀಘ್ರ ಅನುಷ್ಠಾನಗೊಳಿಸುವಂತೆ ರೈತರು ಹೋರಾಟ ಮಾಡುತ್ತಿರುವುದು ನ್ಯಾಯಸಮ್ಮತವಾಗಿದೆ. ಇದಕ್ಕೆ ಇಡೀ ಚಿತ್ರರಂಗದ ಬೆಂಬಲವಿದೆ ಎಂದರು.

ರೈತ ಈ ದೇಶದ ಅನ್ನದಾತ. ಆತನಿಲ್ಲದಿದ್ದರೆ ನಾವ್ಯಾರೂ ಇಲ್ಲ. ಕಾರಣ ಅನ್ನದಾತನ ಕೂಗನ್ನು ನೀವು ಮನ್ನಿಸಿ ಆತನಿಗೆ ನ್ಯಾಯ ದೊರಕಿಸಿಕೊಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕರ್ತವ್ಯವೆಂದರು. ಕನ್ನಡ ನೆಲ-ಜಲ-ಭಾಷೆ ವಿಷಯದಲ್ಲಿ ಚಿತ್ರರಂಗ ಸದಾ ಬೆಂಬಲ ನೀಡುವುದು ಎಂದು ಚಿತ್ರನಟ ಜಯಮಾಲಾ ತಿಳಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಉತ್ತರ ಕರ್ನಾಟಕದ ನರಗುಂದ, ನವಲಗುಂದ, ಹುಬ್ಬಳ್ಳಿ, ಧಾರವಾಡಗಳಲ್ಲಿ ನಡೆಯುತ್ತಿರುವ ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕಾಗಿ ಹೋರಾಟ ಮಾಡುತ್ತಿರುವ ರೈತರು ಹಾಗೂ ನಾಗರಿಕರ ಬೆಂಬಲ ವ್ಯಕ್ತಪಡಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಚಿತ್ರನಟ ಜಯಮಾಲಾ ತಿಳಿಸಿದ್ದಾರೆ.

ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಸಲ್ಲದು ಎಂದ ಅವರು ರೈತರ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂಧಿಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಅಗತ್ಯವಾಗಿದೆ ಎಂದರು.

ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕಾಗಿ ರೈತರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿರುವುದು ಖೇದಕರ. ಈ ಸಮಸ್ಯೆ ಬಗ್ಗೆ ನ್ಯಾಯಾಧೀಕರಣ ಶೀಘ್ರ ತೀರ್ಪು ನೀಡಬೇಕು ಎಂದು ಚಿತ್ರನಟಿ ಅನು ಪ್ರಭಾಕರ್ ಹೇಳಿದ್ದಾರೆ. ನ್ಯಾಯಯುತವಾಗಿ ನೀರು ಹಂಚುವುದರಲ್ಲಿ ಯಾವುದೇ ತಪ್ಪಿಲ್ಲ ಈ ಸಂಬಂಧ ಕರ್ನಾಟಕ ಸರ್ಕಾರ ಗೋವಾ ರಾಜ್ಯದ ಮನವೊಲಿಸಬೇಕು ಎಂದಿದ್ದಾರೆ.

Write A Comment